ಬೆಂಗಳೂರು: ವೃದ್ಧಾಶ್ರಮದಲ್ಲಿ ವೃದ್ಧೆಯನ್ನು ಕೂಡಿ ಹಾಕಿ, ಊಟ ಕೊಡದೇ ಚಿತ್ರಹಿಂಸೆ ನೀಡಿದ ಸಿಬ್ಬಂದಿ, ಆಕೆಯ ಕೊಲೆಗೆ ಕಾರಣವಾದ ಮಹಿಳೆ ಸೇರಿ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಾಗರಬಾವಿಯ ಉಸಿರು ಫೌಂಡೇಶನ್ ನ ಯೋಗೇಶ್, ವೃದ್ಧಾಶ್ರಮದ ಸಿಬ್ಬಂದಿಗಳಾದ ಭಾಸ್ಕರ್, ಪ್ರೇಮಾ, ಮಂಜುನಾಥ ಮತ್ತು ವೃದ್ಧೆಯನ್ನು ಕೊಲೆಮಾಡಿದ ವಸಂತಮ್ಮ ಅವರನ್ನು ಆರ್.ಎಂ.ಸಿ. ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.
82 ವರ್ಷದ ಕಮಲಮ್ಮ ಕೊಲೆಯಾದವರು. ವಸಂತಮ್ಮ ಕುರ್ಚಿಯಿಂದ ಹಲ್ಲೆ ಮಾಡಿದ್ದರಿಂದ ತೀವ್ರ ರಕ್ತಸ್ರಾವ ಉಂಟಾಗಿ ಕಮಲಮ್ಮ ಮೃತಪಟ್ಟಿದ್ದು, ಪ್ರಕರಣವನ್ನು ಮುಚ್ಚಿಹಾಕಲು ವೃದ್ಧಾಶ್ರಮದ ಸಿಬ್ಬಂದಿ ಪ್ರಯತ್ನ ನಡೆಸಿದ್ದಾರೆ ಎನ್ನುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ಹಳೆ ಮದ್ರಾಸ್ ರಸ್ತೆ ಭಟ್ಟರಹಳ್ಳಿಯ ವ್ಯಕ್ತಿಯೊಬ್ಬರು ತಮ್ಮ ತಾಯಿ ಕಮಲಮ್ಮರಿಗೆ ಮರೆವು ಕಾಯಿಲೆ ಇದ್ದ ಕಾರಣ ಚಿಕಿತ್ಸೆ ಕೊಡಿಸಲು ನಾಗರಬಾವಿಗೆ ಉಸಿರು ಫೌಂಡೇಶನ್ ನಡೆಸುತ್ತಿದ್ದ ವೃದ್ಧಾಶ್ರಮಕ್ಕೆ ದಾಖಲಿಸಿ ಪ್ರತಿ ತಿಂಗಳು 10 ಸಾವಿರ ರೂಪಾಯಿ ಕೊಡುತ್ತಿದ್ದರು.
20 ದಿನಗಳ ಇಂದೆ ಕಂಠೀರವ ಸ್ಟುಡಿಯೋ ಬಳಿ ಇರುವ ವೃದ್ಧಾಶ್ರಮದ ಶಾಖೆಗೆ ಕಮಲಮ್ಮ ಅವರನ್ನು ಸ್ಥಳಾಂತರ ಮಾಡಲಾಗಿತ್ತು. ಕತ್ತಲೆ ಕೋಣೆಯಲ್ಲಿ ಕೂಡಿಹಾಕಿ ಎರಡು ದಿನಕ್ಕೆ ಒಂದು ಸಲ ಊಟ ಕೊಡುತ್ತಿದ್ದರು. ಕಮಲಮ್ಮರೊಂದಿಗೆ ವಸಂತಮ್ಮ ಕೂಡ ಇದ್ದು, ಊಟಕ್ಕಾಗಿ ಇಬ್ಬರ ನಡುವೆ ಜಗಳವಾದಾಗ ಕುರ್ಚಿಯಿಂದ ಕಮಲಮ್ಮ ತಲೆಗೆ ವಸಂತಮ್ಮ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವ ಉಂಟಾಗಿ ಕಮಲಮ್ಮ ಮೃತಪಟ್ಟಿದ್ದು, ಆಶ್ರಮದ ಸಿಬ್ಬಂದಿ ಮೃತದೇಹವನ್ನು ಮೊದಲನೇ ಮಹಡಿಗೆ ಸ್ಥಳಾಂತರಿಸಿ ಬಟ್ಟೆ ಬದಲಿಸಿದ್ದಾರೆ. ಮಗನಿಗೆ ಕರೆಮಾಡಿ ನಿಮ್ಮ ತಾಯಿಗೆ ಉಸಿರಾಟ ತೊಂದರೆ ಇದೆ ಬೇಗ ಬನ್ನಿ ಎಂದು ತಿಳಿಸಿದ್ದಾರೆ.
ಅವರ ಪುತ್ರ ಬಂದು ನೋಡಿದಾಗ ರಕ್ತದ ಕಲೆಗಳು ಕಂಡುಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ.