ಚಿತ್ರದುರ್ಗ: ಮದುವೆಗೆ ಪೋಷಕರು ಒಪ್ಪದ ಕಾರಣ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರಿಯೂರು ತಾಲ್ಲೂಕಿನ ಕೂನಿಕೆರೆ ಸಮೀಪ ವಾಣಿವಿಲಾಸ ನಾಲೆ ಬಳಿ ನಡೆದಿದೆ.
ಹಿರಿಯೂರಿನಲ್ಲಿ ನರ್ಸಿಂಗ್ ಓದುತ್ತಿರುವ 22 ವರ್ಷದ ಯುವತಿ ಮತ್ತು ಪರಶುರಾಂಪುರದ ವೃಂದನಹಳ್ಳಿಯ ತಿಪ್ಪೇಸ್ವಾಮಿ(32) ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ.
ತಿಪ್ಪೇಸ್ವಾಮಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದು, ಅವರು ಪತ್ನಿ ಮತ್ತು ಮಕ್ಕಳಿಂದ ದೂರವಾಗಿದ್ದಾರೆ. ಉಡುವಳ್ಳಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಯುವತಿಯೊಂದಿಗೆ ಗೆಳೆತನವಾಗಿ ಪ್ರೀತಿಸಿದ್ದಾರೆ. ಆದರೆ, ಮದುವೆಯಾಗಿ ಮಕ್ಕಳು ಇರುವ ವ್ಯಕ್ತಿಯನ್ನು ನರ್ಸಿಂಗ್ ಓದುತ್ತಿರುವ ಮಗಳು ಮದುವೆಯಾಗಲು ಯುವತಿಯ ಪೋಷಕರು ಒಪ್ಪಿರಲಿಲ್ಲ.
ಇದರಿಂದ ಮನನೊಂದ ತಿಪ್ಪೇಸ್ವಾಮಿ ಹಾಗೂ ಯುವತಿ ಕೂನಿಕೆರೆ ಸಮೀಪ ವಾಣಿವಿಲಾಸ ನಾಲೆಯ ಬಳಿ ವಿಷ ಸೇವಿಸಿದ್ದಾರೆ. ವಿಷ ಸೇವನೆ ಬಳಿಕ ತಿಪ್ಪೇಸ್ವಾಮಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.