ಬೆಂಗಳೂರು: ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಸೌಲಭ್ಯ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ವಿಜಯನಗರದ ಶ್ರೀ ಆದಿಚುಂಚನಗಿರಿ ಮಠದಲ್ಲಿ ನಡೆದ ನಿಮ್ಮ ಸ್ಪಂದನೆ ನಮ್ಮ ವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕಿತರಿಗೆ ಪ್ರತ್ಯೇಕ ಐಸಿಯು, ಆಕ್ಸಿಜನ್ ಸೌಲಭ್ಯ, ಸಿಬ್ಬಂದಿ, ಪ್ರತ್ಯೇಕ ಮಕ್ಕಳ ವಿಭಾಗ, ವೆಂಟಿಲೇಟರ್ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಕನಿಷ್ಠ 25 ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ 100 ಐಸಿಯು ಬೆಡ್ ಗಳ ಪ್ರತ್ಯೇಕ ವಿಭಾಗ ನಿರ್ಮಾಣ ಮಾಡಲಾಗುತ್ತಿದೆ. ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಟ್ಯಾಂಕ್ ಗಳನ್ನು ಅಳವಡಿಸಲಾಗಿದ್ದು, ಈಗಾಗಲೇ ಕೆಲಸ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಗಳಲ್ಲಿ ಮೂಲಸೌಲಭ್ಯ ಅಭಿವೃದ್ಧಿಪಡಿಸಲಾಗುತ್ತಿದೆ. 2000 ತಜ್ಞ ವೈದ್ಯರು ಸೇರಿದಂತೆ 3000 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇನ್ನೂ 7000 ನರ್ಸ್ ಹಾಗೂ ಡಿ ಗ್ರೂಪ್ ನೌಕರರು ಮತ್ತು 3000 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.