ಕಲಬುರಗಿ: ಪ್ರಸಕ್ತ 2021-22ನೇ ಸಾಲಿಗೆ ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ(ಪಿ.ಎಂ.ಇ.ಜಿ.ಪಿ.) ಉದ್ಯೋಗ ಕೈಗೊಳ್ಳಲು ಹಾಗೂ ಕೈಗಾರಿಕಾ, ಸೇವಾ ಘಟಕಗಳ ಸ್ಥಾಪನೆಗೆ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯಕ್ಕಾಗಿ ಅರ್ಹ ಅಭ್ಯರ್ಥಿಗಳು, ಸ್ವಸಹಾಯ ಗುಂಪುಗಳು ಹಾಗೂ ಸಂಘ-ಸಂಸ್ಥೆಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಅರ್ಜಿದಾರರ ವಯೋಮಿತಿ 18 ವರ್ಷ ತುಂಬಿರಬೇಕು. ಈ ಯೋಜನೆಯಡಿ ಕೈಗಾರಿಕಾ/ಉತ್ಪಾದನಾ ಕ್ಷೇತ್ರಕ್ಕೆ 25 ಲಕ್ಷ ರೂ.ಗಳ ಹಾಗೂ ಸೇವಾ ಕ್ಷೇತ್ರಕ್ಕೆ 10 ಲಕ್ಷ ರೂ.ಗಳ ವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಇದಲ್ಲದೇ ಯೋಜನಾ ವೆಚ್ಚ ಉತ್ಪಾದಕ ಘಟಕಗಳಿಗೆ 10 ಲಕ್ಷ ರೂ. ಮತ್ತು ಸೇವಾ ಘಟಕಗಳಿಗೆ 5 ಲಕ್ಷ ರೂ. ಮೇಲ್ಪಟ್ಟ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವ ಅರ್ಜಿದಾರರು 8ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಈ ಮೊದಲು ಕೇಂದ್ರ, ರಾಜ್ಯ ಸರ್ಕಾರದ ಸಹಾಯಧನ ಯೋಜನೆಗಳಡಿ ಪ್ರಯೋಜನ ಪಡೆದಿದ್ದಲ್ಲಿ, ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಕೇವಲ ಹೊಸ ಘಟಕಗಳ ಸ್ಥಾಪನೆಗೆ ಮಾತ್ರ ಅನ್ವಯವಾಗುತ್ತದೆ.
ಅರ್ಹ ಫಲಾನುಭವಿಗಳು ವಿದ್ಯಾರ್ಹತೆ ಪ್ರಮಾಣ ಪತ್ರಗಳು (ತಾಂತ್ರಿಕ ಮತ್ತು ಶೈಕ್ಷಣಿಕ), ಆಧಾರ ಕಾರ್ಡ್, ಜಾತಿ ಪ್ರಮಾಣಪತ್ರ, ಪಡಿತರ ಚೀಟಿ, ವಾಸಸ್ಥಳ ಬಗ್ಗೆ ದಾಖಲಾತಿಗಳು, ಯೋಜನಾ ವರದಿ, ಭಾವಚಿತ್ರ, ಐ.ಡಿ. ಕಾರ್ಡ್, ಖಾತಾ ನಕಲು, ಜನಸಂಖ್ಯೆ ಪ್ರಮಾಣಪತ್ರ (ಗ್ರಾಮೀಣ ಭಾಗಕ್ಕೆ ಮಾತ್ರ), ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಕಂಪ್ಯೂಟರ್/ತಾಂತ್ರಿಕ ತರಬೇತಿ ಪಡೆದಿದ್ದಲ್ಲಿ ಪ್ರಮಾಣಪತ್ರ. ದಾಖಲಾತಿಗಳನ್ನು ಪಿ.ಎಂ.ಇ.ಜಿ.ಪಿ. ತಂತ್ರಾಂಶದಲ್ಲಿ ಅಳವಡಿಸಬೇಕು.
ಹೆಚ್ಚಿನ ಮಾಹಿತಿಯನ್ನು www.pmegp.in ನ್ಯೂ ಪೋರ್ಟಲ್ ವೆಬ್ಸೈಟ್ನ್ನು ಅಥವಾ www.kvic.org.in ದಿಂದ ಅಥವಾ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾಕಾ ಕೇಂದ್ರ, ಜೇವರ್ಗಿ ಕ್ರಾಸ್ ಹತ್ತಿರ, ಎಂ.ಎಸ್.ಕೆ. ಮಿಲ್ ರಸ್ತೆ, ಕಲಬುರಗಿ ಕಚೇರಿಗೆ ಸಂಪರ್ಕಿಸಲು ಕೋರಲಾಗಿದೆ.