ಐವಿಎಫ್ ತಂತ್ರಜ್ಞಾನದ ಮೂಲಕ ಮಗುವನ್ನು ಹೊಂದುವ ತಾಯಿಯು ಜನನ ಪ್ರಮಾಣ ಪತ್ರದಲ್ಲಿ ತಂದೆಯ ಹೆಸರನ್ನು ನಮೂದಿಸಬೇಕಾದ ಕಾಲಂನ್ನು ಖಾಲಿ ಬಿಡಬಹುದು ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪನ್ನು ನೋಡಿದೆ. ಒಂಟಿ ಮಹಿಳೆ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಈ ಮಹತ್ವದ ತೀರ್ಪನ್ನು ನೀಡಿದೆ.
ನ್ಯಾಯಮೂರ್ತಿ ಸತೀಶ್ ನಿನಾನ್ ಗರ್ಭ ಧರಿಸುವ ಒಂಟಿ ಮಹಿಳೆಗೆ ಸಂಬಂಧಿಸಿದ ಜನನ ಹಾಗೂ ಮರಣ ನೋಂದಣಿಗೆ ಪ್ರತ್ಯೇಕ ಪ್ರಮಾಣ ಪತ್ರಗಳನ್ನು ಒದಗಿಸುವಂತೆ ಕೇರಳ ಸರ್ಕಾರಕ್ಕೆ ಸೂಚನೆ ನೀಡಿದೆ. ಐವಿಎಫ್ ತಂತ್ರಜ್ಞಾನದ ಮೂಲಕ ಜನಿಸುವ ಮಗುವಿಗೆ ತಂದೆಯ ವಿವರವನ್ನು ಜನನ ಹಾಗೂ ಮರಣ ಪ್ರಮಾಣ ಪತ್ರದಲ್ಲಿ ನಮೂದಿಸುವಂತೆ ಹೇಳುವುದು ತಾಯಿ ಹಾಗೂ ಮಗುವಿನ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಹೇಳಿದೆ.
ವೀರ್ಯಾಣು ದಾನಿಯ ಸಹಾಯದಿಂದ ಜನಿಸಿದ ಮಗುವು ದಾನಿಯ ಗುರುತನ್ನು ಕಾನೂನಿನ ಅಡಿಯಲ್ಲಿ ಬಹಿರಂಗ ಪಡಿಸುವಂತಿಲ್ಲ. ಈ ರೀತಿ ಮಾಡಿದರೆ ಅದು ಖಾಸಗಿತನದ ಅಡ್ಡಿಯಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಅರ್ಜಿದಾರರು ಜನನ ಹಾಗೂ ಮರಣ ಪ್ರಮಾಣ ಪತ್ರದಲ್ಲಿ ತಂದೆಯ ಹೆಸರನ್ನು ನಮೂದಿಸಬೇಕೆಂದಿಲ್ಲ ಎಂದು ಕೋರ್ಟ್ ಹೇಳಿದೆ.
ಐವಿಎಫ್ ತಂತ್ರಜ್ಞಾನದ ಮೂಲಕ ಮಗುವನ್ನು ಹೊಂದಿದ್ದ ವಿಚ್ಛೇದಿತ ಮಹಿಳೆಯೊಬ್ಬರು ಜನನ ಪ್ರಮಾಣ ಪತ್ರದಲ್ಲಿ ತಂದೆಯ ವಿವರ ನೀಡುವುದಿಲ್ಲ ಎಂದು ಹೇಳಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಮಹತ್ವದ ತೀರ್ಪನ್ನು ನೀಡಿದೆ.