ಕಳಪೆ ರಸ್ತೆಯ ಕಾರಣದಿಂದಾಗಿ ಆಂಬುಲೆನ್ಸ್ ಸರಿಯಾದ ಸಮಯಕ್ಕೆ ಬಾರದ ಹಿನ್ನೆಲೆ ಗರ್ಭಿಣಿ ಕೆಸರಿನ ಹಾದಿಯಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನೆಯು ಮಧ್ಯ ಪ್ರದೇಶದ ಸಾತ್ನಾ ಜಿಲ್ಲೆಯಲ್ಲಿ ನಡೆದಿದೆ.
25 ವರ್ಷದ ನೀಲಂ ಆದಿವಾಸಿ ಹಾಗೂ ಆಕೆಯ ನವಜಾತ ಶಿಶುವನ್ನು ಬಳಿಕ ಕೊಟೋರ್ ತಹಸೀಲ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪತಿ ಮಾಹಿತಿ ನೀಡಿದ್ದಾರೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.
ನನ್ನ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ನಾನು ಕೂಡಲೇ ಜನನಿ ಎಕ್ಸ್ಪ್ರೆಸ್ಗೆ ಕರೆ ಮಾಡಿದೆ. ಆಂಬುಲೆನ್ಸ್ ಗ್ರಾಮಕ್ಕೇನೋ ಎಂಟ್ರಿ ಕೊಟ್ಟಿತ್ತು. ಅದರೆ ಕಳಪೆ ರಸ್ತೆಯಿಂದಾಗಿ ನಮ್ಮ ಮನೆಯವರೆಗೆ ತಲುಪಲು ಸಾಧ್ಯವಾಗಲಿಲ್ಲ. 2 ಕಿಲೋಮೀಟರ್ವರೆಗೂ ಕೆಸರು ರಸ್ತೆಯೇ ಇರೋದ್ರಿಂದ ನಮಗೂ ಏನು ಮಾಡಬೇಕೆಂದು ದಿಕ್ಕೇ ತೋಚದಂತಾಗಿತ್ತು ಎಂದು ನೀಲಂ ಪತಿ ಪಂಕಜ್ ಆದಿವಾಸಿ ಹೇಳಿದ್ರು.
ಕೆಸರಿನ ಹಾದಿಯಲ್ಲಿ ನಡೆದುಕೊಂಡು ಬರುತ್ತಿರುವಾಗಲೇ ಹೆರಿಗೆ ನೋವು ಹೆಚ್ಚಾಗಿದ್ದರಿಂದ ನೀಲಂ ಕೆಸರು ಹಾದಿಯಲ್ಲೇ ಮಗುವಿಗೆ ಜನ್ಮ ನೀಡಿದ್ದಳು ಎನ್ನಲಾಗಿದೆ. ಅದೃಷ್ಟವಶಾತ್ ತಾಯಿ ಹಾಗೂ ಮಗುವಿನ ಆರೋಗ್ಯ ಸ್ಥಿರವಾಗಿದೆ.