ಸುಮಾರು 140ಕ್ಕೂ ಅಧಿಕ ಬಣ್ಣದ ಕೊಕ್ಕರೆಗಳು ದೆಹಲಿ ಮೃಗಾಲಯಕ್ಕೆ ವಲಸೆ ಬಂದಿವೆ ಎಂದು ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ. ಈ ಹಕ್ಕಿಗಳು ಸಾಮಾನ್ಯವಾಗಿ ಮಧ್ಯ ಆಗಸ್ಟ್ ತಿಂಗಳಲ್ಲಿ ಪಶ್ಚಿಮ ಭಾಗಗಳಿಂದ ರಾಷ್ಟ್ರ ರಾಜಧಾನಿಗೆ ವಲಸೆ ಬರುತ್ತದೆ. ಆದರೆ ಈ ಬಾರಿ ಈ ಹಕ್ಕಿಗಳು ಬೇಗನೇ ದೆಹಲಿಗೆ ವಲಸೆ ಬಂದಿವೆ.
ಆಗಸ್ಟ್ 6ರಂದು ದೆಹಲಿಯಲ್ಲಿ ಮೊದಲ ಬಾರಿಗೆ ಬಣ್ಣದ ಕೊಕ್ಕರೆಗಳು ಕಾಣಿಸಿಕೊಂಡಿದ್ದವು. ದೆಹಲಿ ಮೃಗಾಲಯ ನಿರ್ದೇಶಕ ರಮೇಶ್ ಕುಮಾರ್ ಪಾಂಡೆ ನೀಡಿರುವ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ ಈ ಹಕ್ಕಿಗಳು ಗೂಡು ಕಟ್ಟಿ ಸಂತಾನೋತ್ಪತ್ತಿ ಮಾಡುವ ಕೆಲವೇ ಪ್ರದೇಶಗಳಲ್ಲಿ ಈ ಮೃಗಾಲಯ ಕೂಡ ಒಂದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಆಗಸ್ಟ್ ತಿಂಗಳ ಕೊನೆಯವರೆಗೆ ಈ ಹಕ್ಕಿಗಳ ಸಂಖ್ಯೆಯು 500 ದಾಟುವ ಸಾಧ್ಯತೆ ಇದೆ. ಈ ಪಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಕ್ಷಿ ಪ್ರಿಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮೃಗಾಲಯದಲ್ಲಿ ಪಕ್ಷಿ ಪ್ರವಾಸವನ್ನು ಆಯೋಜಿಸುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಮೃಗಾಲಯಕ್ಕೆ ಸಂದರ್ಶಕರ ಭೇಟಿಯನ್ನು ನಿಲ್ಲಿಸಿದ ದಿನ ಈ ಪಕ್ಷಿ ವೀಕ್ಷಣೆ ಪ್ರವಾಸವನ್ನು ನಡೆಸಲಾಗುತ್ತದೆ. ಮೊದಲ ಹಂತದಲ್ಲಿ 20 ಪಕ್ಷಿ ಪ್ರಿಯರ ಗುಂಪನ್ನು ರಚಿಸಲಾಗಿದೆ ಎಂದು ಪಾಂಡೆ ಹೇಳಿದ್ದಾರೆ.
ಈ ಬಣ್ಣದ ಕೊಕ್ಕರೆಗಳು ಆಗಸ್ಟ್ನಿಂದ ಅಕ್ಟೋಬರ್ ತಿಂಗಳವರೆಗೂ ದೆಹಲಿಗೆ ವಲಸೆ ಬರುತ್ತವೆ ಹಾಗೂ ಸಂತಾನೋತ್ಪತ್ತಿಗಾಗಿ ಮಾರ್ಚ್ ತಿಂಗಳವರೆಗೂ ಇಲ್ಲೇ ನೆಲೆಸುತ್ತವೆ. ಪಕ್ಷಿ ವೀಕ್ಷಣೆ ಪ್ರವಾಸದಿಂದ ವಿದ್ಯಾರ್ಥಿಗಳಿಗೆ ಹಾಗೂ ಪಕ್ಷಿ ಪ್ರಿಯರಿಗೆ ನಿಜಕ್ಕೂ ಪ್ರಯೋಜನವಿದೆ. ಅಲ್ಲದೇ ಮೃಗಾಲಯಕ್ಕೂ ಇದರಿಂದ ಜನಪ್ರಿಯತೆ ಸಿಗುತ್ತದೆ ಎಂದು ಪಾಂಡೆ ಹೇಳಿದ್ರು.