ಕೋಲ್ಕತ್ತಾ: ನಕ್ಷೆಯೊಂದರಲ್ಲಿ ಪಟ್ಟಣದ ಜಾಗ ಅದಲು ಬದಲಾದ ಕಾರಣ, ಇಂದಿಗೂ ಕೂಡ ಪಶ್ಚಿಮ ಬಂಗಾಳದ ‘ಶಿಬ್ನಿಬಾಸ್’ ಪಟ್ಟಣವು ಆ.18ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸುವಂತಾಗಿದೆ. ಇದರ ಕುತೂಹಲಕಾರಿ ಹಿನ್ನೆಲೆಯು ಹೀಗಿದೆ; 200 ವರ್ಷಗಳ ಬ್ರಿಟಿಷರ ಆಡಳಿತದಿಂದ ಮುಕ್ತವಾಗಲಿದ್ದ ಭಾರತಕ್ಕೆ ಸ್ವಾತಂತ್ರ್ಯ ನೀಡುವುದಾಗಿ 1947ರ ಆ.12 ರಂದು ವೈಸ್‍ರಾಯ್ ಮೌಂಟ್ ಬ್ಯಾಟನ್ ಘೋಷಿಸಿದ್ದರು.
ಪಾಕಿಸ್ತಾನ, ಭಾರತದ ಭೂಮಿಯ ಗಡಿಗಳನ್ನು ನಿರ್ಧರಿಸಿ ಹೊಸ ನಕ್ಷೆಯನ್ನು ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿತ್ತು. ಬ್ರಿಟಿಷ್ ಅಧಿಕಾರಿ ಸೈರಿಲ್ ರೆಡ್ ಕ್ಲಿಫ್ ನಕ್ಷೆ ರಚನೆಯ ಹೊಣೆ ಹೊತ್ತಿದ್ದರು. ಈ ವೇಳೆ ಹಿಂದೂ ಬಹುಸಂಖ್ಯಾತರ ಪಟ್ಟಣಗಳಾದ ಮಾಲ್ಡಾ, ನಾದಿಯಾ ಪೂರ್ವ ಪಾಕಿಸ್ತಾನ ಅಥವಾ ಇಂದಿನ ಬಾಂಗ್ಲಾದೇಶ ಪಾಲಾಗಿತ್ತು. ಇದರ ವಿರುದ್ಧ ಗ್ರಾಮಗಳಲ್ಲಿ ದೊಡ್ಡ ಮಟ್ಟದಲ್ಲಿ ಭಾರಿ ವಿರೋಧ, ಕೋಮುಗಲಭೆ ಎದ್ದೇಳುವ ಅಪಾಯ ಎದುರಾಗಿತ್ತು. ಆ ವೇಳೆ ನಾದಿಯಾ ರಾಜವಂಶಸ್ಥರು ಮೌಂಟ್‍ಬ್ಯಾಟನ್ ರನ್ನು ಭೇಟಿ ಮಾಡಿ ನಕ್ಷೆಯ ಮರುರಚನೆಗೆ ಆಗ್ರಹಿಸಿದ್ದರು.
ಅದರಂತೆ ಆ. 17ರ ರಾತ್ರಿ ಹೊಸ ನಕ್ಷೆ ರಚನೆಯಾಗಿ ಶಿಬ್ನಿಬಾಸ್ ಭಾರತಕ್ಕೆ ಸೇರಿತು. ಮಾರನೇ ದಿನ ಅಂದರೆ, ಆ. 18ರಂದು ಸ್ಥಳೀಯರು ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರು. ಈ ಪ್ರಕ್ರಿಯೆಯ ಸಾರಥ್ಯ ವಹಿಸಿದ್ದು ಕ್ರಾಂತಿಕಾರಿ ಪ್ರಮಥನಾಥ ಸುಕುಲ್ ಎಂದು ತಿಳಿದುಬಂದಿದೆ. ಇದೇ ರೀತಿ ಉತ್ತರ 24 ಪರಗಣ ಜಿಲ್ಲೆಯ ಬಾನ್‍ಗಾಂವ್ ಪಟ್ಟಣದಲ್ಲಿ ಕೂಡ ಆ.18ಕ್ಕೆ ಹಲವರು ಸ್ವಾತಂತ್ರ್ಯ ದಿನ ಆಚರಿಸುತ್ತಾರೆ. ಆ. 15ರಂದು ಕೂಡ ಸರಳ ಸಮಾರಂಭ ಮಾಡುತ್ತಾರೆ.