ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುತ್ತಾರೆ. ಮಳೆಗಾಲದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಕೊರೋನಾ ಹರಡುವ ಸಾಧ್ಯತೆ ಹಿನ್ನಲೆಯಲ್ಲಿ ನಿರ್ಬಂಧ ವಿಧಿಸಲಾಗಿದೆ.
ಜೋಗ ವೀಕ್ಷಿಸಲು ಬರುವ ಪ್ರವಾಸಿಗರ ಮಾರ್ಗಸೂಚಿಯಲ್ಲಿ ತಿದ್ದುಪಡಿ ಮಾಡಲಾಗಿದೆ. ಪ್ರವಾಸಿಗರಿಗೆ RTPCR ನೆಗೆಟಿವ್ ವರದಿ ಪ್ರಮಾಣ ಪತ್ರ ಕಡ್ಡಾಯವೆಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಈ ಆದೇಶಕ್ಕೆ ತಿದ್ದುಪಡಿ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳಿಗೆ ತೆರಳುವ ಪ್ರವಾಸಿಗರ 72 ಗಂಟೆಗಳ ಒಳಗೆ ಪಡೆದ ಕೊರೋನಾ RTPCR ನೆಗೆಟಿವ್ ವರದಿ, ರಾಟ್ ನೆಗೆಟಿವ್ ವರದಿ, ಇಲ್ಲವೇ ಎರಡನೆ ಡೋಸ್ ಕೋವಿಡ್ ಲಸಿಕೆ ಪಡೆದ ಬಗ್ಗೆ ಪ್ರಮಾಣಪತ್ರಗಳಲ್ಲಿ ಒಂದನ್ನು ಹಾಜರುಪಡಿಸಿದರೆ ಸಾಕು ಎಂದು ತಿದ್ದುಪಡಿ ಆದೇಶ ಹೊರಡಿಸಲಾಗಿದೆ ಎಂದು ಪ್ರವಾಸೋದ್ಯಮ ಜಂಟಿ ಕಾರ್ಯದರ್ಶಿ ಹೆಚ್.ಎಸ್. ರಾಮಕೃಷ್ಣ ಅವರು ಡಿಸಿಯವರ ಆದೇಶಕ್ಕೆ ತಿದ್ದುಪಡಿ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಅಡೆತಡೆಯಿಲ್ಲದೆ ಬಂದು ಹೋಗುತ್ತಿದ್ದಾರೆ. ಜೋಗದಲ್ಲಿ ಮಾತ್ರ ಕಠಿಣ ನಿಯಮ ಜಾರಿ ಮಾಡಲಾಗಿದೆ ಎಂಬ ಆಕ್ಷೇಪವೂ ವ್ಯಕ್ತವಾಗಿದೆ. ವರದಿ ಇಲ್ಲದ ಹೆಚ್ಚಿನ ಪ್ರವಾಸಿಗರು ವಾಪಸ್ ತೆರಳಿದ್ದು, ಕೆಲವರು ಜಗಳವಾಡುತ್ತಾರೆ. ಯಾವುದಾದರೂ ಒಂದು ಪ್ರಮಾಣಪತ್ರವಿದ್ದರೆ ಸಾಕು ಎಂದು ಮಾರ್ಗಸೂಚಿಗೆ ತಿದ್ದುಪಡಿ ಮಾಡಿರುವುದರಿಂದ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.