ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ನಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಮುಂದುವರೆಯಲಿದೆ.
ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಅವರು ಆದೇಶ ಹೊರಡಿಸಿದ್ದು, ಕೆಎಸ್ಆರ್ಟಿಸಿಯ ಕೆಲವು ಬಸ್ ಗಳು, ಆರು ಚಕ್ರದ ಲಾರಿಗಳು ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಸಂಚರಿಸಬಹುದು. ನಾಲ್ಕು ಚಕ್ರದ ವಾಹನ, ಟೆಂಪೋ ಟ್ರಾವೆಲ್ಲರ್, ಆಂಬುಲೆನ್ಸ್, ಕಾರು, ಜೀಪುಗಳ ವ್ಯಾನ್ ಹಾಗೂ ದ್ವಿಚಕ್ರ ವಾಹನಗಳಿಗೆ ದಿನದ 24 ಗಂಟೆಯೂ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
ಫಿಶ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾರ್ಸಿಸ್ ವಾಹನಗಳು, ಬುಲೆಟ್ ಟ್ಯಾಂಕರ್, ಹೆವಿ ಕಮರ್ಷಿಯಲ್ ವಾಹನಗಳು, ಮಲ್ಟಿ ಎಕ್ಸೆಲ್, ಟ್ರಕ್ ಟ್ರೈಲರ್, ಕೆಎಸ್ಸಾರ್ಟಿಸಿ ರಾಜಹಂಸ ಬಸ್ ಗಳು ಮತ್ತು ಅಧಿಕ ಭಾರದ ಸರಕು ಸಾಗಣೆ ವಾಹನಗಳ ಸಂಚಾರವನ್ನು ದಿನದ 24 ಗಂಟೆಗಳ ಕಾಲವೂ ನಿರ್ಬಂಧಿಸಲಾಗಿದೆ.