ಬೆಂಗಳೂರು: ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪೈಕಿ ಒಬ್ಬ ಉತ್ತರ ಭಾರತದವನೆಂದು ಸತೀಶ್ ರೆಡ್ಡಿ ಹೇಳಿದ್ದಾರೆ.
ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ, ಸಿಸಿಟಿವಿ ದೃಶ್ಯ ನೋಡಿದರೆ ಉತ್ತರ ಭಾರತದವರೆಂದು ಗೊತ್ತಾಗುತ್ತದೆ. ಆರೋಪಿಗಳು ಹೊಸಬರಾಗಿದ್ದಾರೆ. ನನಗೆ ಅವರನ್ನು ಹಿಂದೆ ನೋಡಿದ ನೆನಪಿಲ್ಲ. ಯಾರೋ ಹೇಳಿ ಆರೋಪಿಗಳಿಂದ ಕೃತ್ಯ ಮಾಡಿಸಿದ್ದಾರೆ. ಅವರ ಹಿಂದೆ ಯಾರಿದ್ದಾರೆ ಎನ್ನುವುದು ಬಹಿರಂಗವಾಗಬೇಕು ಎಂದು ತಿಳಿಸಿದ್ದಾರೆ.
ಉತ್ತರ ಭಾರತದವರಿಗೆ ಸ್ಥಳೀಯ ರಾಜಕೀಯ ಗೊತ್ತಿರುವುದಿಲ್ಲ. ಅವರಿಗೂ ನಮಗೂ ಏನು ಸಂಬಂಧವಿದೆ? ವಿದ್ವಂಸಕ ಕೃತ್ಯವೆಸಗಲು ಅವರು ಬಂದಿರಬಹುದು.ಅವರು ಹಣಕ್ಕಾಗಿ ಏನು ಬೇಕಾದರೂ ಮಾಡುವ ಗ್ಯಾಂಗ್ ಇರಬಹುದು. ಬೇರೆ ರಾಜಕಾರಣಿಗಳನ್ನೂ ಟಾರ್ಗೆಟ್ ಇಟ್ಟುಕೊಂಡಿರಬಹುದು. ನನ್ನನ್ನು ಮೊದಲು ಟಾರ್ಗೆಟ್ ಮಾಡಿರಬಹುದು ಎಂದು ಸತೀಶ್ ರೆಡ್ಡಿ ತಿಳಿಸಿದ್ದಾರೆ.
ತಿಂಗಳ ಹಿಂದಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗಿದ್ದು, ಮನೆಯೊಳಗೆ ಆರೋಪಿಗಳು ಬಂದಿಲ್ಲ. ಪೊಲೀಸರ ತನಿಖೆಯ ವೇಳೆ ಬಹಳಷ್ಟು ಮಾಹಿತಿ ಲಭ್ಯವಾಗಿದೆ. ರಾಜಕೀಯವಾಗಿ ನಾನು ಯಾರಿಗೂ ತೊಂದರೆ ಕೊಡುವವನಲ್ಲ. ಸ್ಥಳೀಯ ರಾಜಕಾರಣದ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ತುಂಬಾ ದಿನದಿಂದ ಪ್ಲಾನ್ ಮಾಡಿ ಉದ್ದೇಶಪೂರ್ವಕವಾಗಿ ಕೃತ್ಯವೆಸಗಿದ್ದಾರೆ. ಹೆದರಿಸಬೇಕು ಎಂಬ ಉದ್ದೇಶದಿಂದ ಇಂತಹ ಕೃತ್ಯವೆಸಗಿದ್ದಾರೆ. ನಕ್ಸಲ್ ಸಿದ್ಧಾಂತವುಳ್ಳವರು ಎಸಗಿರುವ ಸಾಧ್ಯತೆ ಇದೆ. ಪೊಲೀಸರ ತನಿಖೆಯಿಂದ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದ್ದಾರೆ.