ಕಾಬೂಲ್: ಅಫ್ಘಾನ್ ಮಹಿಳೆಯರು ಭಯೋತ್ಪಾದಕರನ್ನು ಮದುವೆಯಾಗುವಂತೆ ತಾಲಿಬಾನ್ ಉಗ್ರ ಸಂಘಟನೆ ಒತ್ತಾಯಿಸುತ್ತಿದೆ ಎಂಬ ಬಗ್ಗೆ ವರದಿಯಾಗಿದೆ.
ತಾಲಿಬಾನ್ ಅಫ್ಘಾನಿಸ್ತಾನದ ಹಲವು ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳುವ ಮೂಲಕ ತನ್ನ ಹಿಡಿತ ಸಾಧಿಸಿದೆ. ಇದರ ಜೊತೆಗೆ ಈಗ ತನ್ನ ಭಯೋತ್ಪಾದಕರನ್ನು ಮದುವೆಯಾಗುವಂತೆ ಮಹಿಳೆಯರನ್ನು ಒತ್ತಾಯಿಸುತ್ತಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಇನ್ನು ತಾಲಿಬಾನ್ ಹಿಡಿತದಲ್ಲಿರುವ ಪ್ರದೇಶಗಳಲ್ಲಿ ನಾಗರಿಕರ ಮೇಲೆ ಅಪ್ರಚೋದಿತ ದಾಳಿ ಮತ್ತು ಸೆರೆಹಿಡಿದ ಸೈನಿಕರ ಮರಣದಂಡನೆಗೆ ಅಫ್ಘನ್ ಸಾಕ್ಷಿಯಾಗಿದೆ. ಇದರ ಜೊತೆಗೆ ತಾಲಿಬಾನ್ ಸಮುದಾಯಗಳು ಅವಿವಾಹಿತ ಮಹಿಳೆಯರು ತಮ್ಮ ಭಯೋತ್ಪಾದಕರನ್ನು ವಿವಾಹವಾಗುವಂತೆ ಹೇಳುತ್ತಿರುವುದು ಲೈಂಗಿಕ ದೌರ್ಜನ್ಯದ ಒಂದು ರೂಪವಾಗಿದೆ ಎಂದು ಮಾನವ ಹಕ್ಕುಗಳ ಸಂಘಟನೆ ಹೇಳಿದೆ.
ಸಾರ್ವಜನಿಕವಾಗಿ ತಾಲಿಬಾನ್ ಸಂಘಟನೆ ತಮ್ಮ ವಿಜಯದ ಬಗ್ಗೆ ಪ್ರತಿಜ್ಞೆ ಮಾಡಿದೆ. ದೊಡ್ಡ ಪ್ರದೇಶಗಳು ತಮ್ಮ ನಿಯಂತ್ರಣಕ್ಕೆ ಒಳಪಡುವುದರಿಂದ ಯಾರೂ ಭಯಪಡಬೇಕಿಲ್ಲ ಎಂದು ಸರ್ಕಾರಿ ಅಧಿಕಾರಿಗಳು, ಸೈನಿಕರು ಮತ್ತು ಅಫ್ಘಾನಿಸ್ತಾನದ ಜನರಿಗೆ ಭರವಸೆ ನೀಡಿದೆ.
ಇನ್ನು ತಾಲಿಬಾನ್ ಗೆ ಶರಣಾದ ಅಫ್ಘಾನ್ ಸೈನಿಕರನ್ನು ಗಲ್ಲಿಗೇರಿಸಿದ್ದಕ್ಕೆ ಕಾಬೂಲ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯು ತಾಲಿಬಾನ್ ಉಗ್ರ ಸಂಘಟನೆಯನ್ನು ಟೀಕಿಸಿದೆ.
ತಾಲಿಬಾನ್ ದೇಶದ ಹಲವು ಪ್ರಮುಖ ನಗರಗಳ ಮೇಲೆ ನಿಯಂತ್ರಣ ಸಾಧಿಸಿದೆ. ಗುರುವಾರ ರಾತ್ರಿ, ಭಯೋತ್ಪಾದಕ ಗುಂಪು ಗವರ್ನರ್ ಕಚೇರಿ ಮತ್ತು ನಗರದ ಇತರ ಆಡಳಿತಾತ್ಮಕ ಕಟ್ಟಡಗಳನ್ನು ವಶಪಡಿಸಿಕೊಂಡ ನಂತರ ದೇಶದ ಎರಡನೇ ಅತಿದೊಡ್ಡ ನಗರ ಕಂದಹಾರ್ ಅನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ಹೇಳಿಕೊಂಡಿದೆ. ಇಲ್ಲಿಯವರೆಗೆ, ಭಯೋತ್ಪಾದಕ ಗುಂಪು ದೇಶದ 12 ಪ್ರಾಂತೀಯ ರಾಜಧಾನಿಗಳನ್ನು ವಶಪಡಿಸಿಕೊಂಡಿದೆ.
ತಾಲಿಬಾನ್ ಮತ್ತು ವಾಷಿಂಗ್ಟನ್ ನಡುವೆ ನಡೆದ ಶಾಂತಿ ಒಪ್ಪಂದದ ಅಡಿಯಲ್ಲಿ ಅಫ್ಘಾನಿಸ್ತಾನದಿಂದ ಯುಎಸ್ ಪಡೆಗಳು ಹಿಂತೆಗೆದುಕೊಂಡ ನಂತರ ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳುವ ಮತ್ತು ಅಧಿಕಾರವನ್ನು ಪಡೆದುಕೊಳ್ಳುವ ಪ್ರಯತ್ನದಲ್ಲಿ ಭಯೋತ್ಪಾದಕ ಗುಂಪು ಅಫ್ಘಾನ್ ಸರ್ಕಾರದ ಪಡೆಗಳೊಂದಿಗೆ ವ್ಯಾಪಕವಾಗಿ ಹೋರಾಡುತ್ತಿದೆ.