ಜಕಾರ್ತಾ, ಇಂಡೋನೇಷ್ಯಾ: ವಿಶ್ವ ಆರೋಗ್ಯ ಸಂಸ್ಥೆ ಯಾವುದೇ ವೈಜ್ಞಾನಿಕ ಮಾನ್ಯತೆಯನ್ನು ಹೊಂದಿಲ್ಲ ಎಂದು ಘೋಷಿಸಿದ 7 ವರ್ಷಗಳ ನಂತರ ಸೇನೆಗೆ ಮಹಿಳಾ ಅಭ್ಯರ್ಥಿಗಳ ನೇಮಕಾತಿಗಳ ಮೇಲಿನ ನಿಂದನೀಯ ‘ಕನ್ಯತ್ವ ಪರೀಕ್ಷೆ’ ನಿಲ್ಲಿಸುವ ನಿರ್ಧಾರವನ್ನು ಡೋನೇಷ್ಯಾ ಕೈಗೊಂಡಿದೆ. ಈ ನಿರ್ಧಾರವನ್ನು ಮಾನವ ಹಕ್ಕುಗಳ ಗುಂಪು ಸ್ವಾಗತಿಸಿದೆ.
ಸೇನಾ ಮುಖ್ಯಸ್ಥ ಜನರಲ್ ಆಂಡಿಕಾ ಪೆರ್ಕಾಸಾ ಅವರು, ಸೈನ್ಯವು ಇನ್ನು ಮುಂದೆ ಮಹಿಳೆಯರನ್ನು ಆಕ್ರಮಣಕಾರಿ ಪರೀಕ್ಷೆಗಳಿಗೆ ಒಳಪಡಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಅರ್ಜಿದಾರರು ದೈಹಿಕ ತರಬೇತಿಯಲ್ಲಿ ಪಾಲ್ಗೊಳ್ಳುವ ಸಾಮರ್ಥ್ಯದ ಮೇಲೆ ಮಾತ್ರ ಮೌಲ್ಯಮಾಪನ ಮಾಡಬೇಕು. ಅವರು ಬಣ್ಣ ಕುರುಡುತನ ಹೊಂದಿದ್ದಾರೆಯೇ? ಬೆನ್ನುಮೂಳೆಯ ಮತ್ತು ಹೃದಯದ ಸ್ಥಿತಿಯನ್ನು ಪರೀಕ್ಷಿಸಿ ಅವರು ಆರೋಗ್ಯವಾಗಿದ್ದಾರೆಯೇ? ಜೀವಕ್ಕೆ ಅಪಾಯಕಾರಿಯಾದ ವೈದ್ಯಕೀಯ ಸಮಸ್ಯೆಗಳನ್ನು ಎದುರಿಸುತ್ತಿಲ್ಲವೇ ಎಂಬುದನ್ನು ಪರೀಕ್ಷಿಸಲಾಗುವುದು ಎಂದು ಉತ್ತರ ಸುಲವೇಸಿಯ ಮಿನಹಾಸ ಜಿಲ್ಲೆಯಲ್ಲಿ ಯುಎಸ್-ಇಂಡೋನೇಷ್ಯಾ ವಾರ್ಷಿಕ ಜಂಟಿ ಸೇನಾ ಸಮರಾಭ್ಯಾಸದ ವೇಳೆ ಪೆರ್ಕಾಸ ತಿಳಿಸಿದರು.
ಸೇನೆಯ ಆಸ್ಪತ್ರೆಯ ನಿರ್ದೇಶಕರು ಮತ್ತು ವೈದ್ಯಕೀಯ ಅಧಿಕಾರಿಗಳಿಗೆ ಮೇ ತಿಂಗಳಿನಿಂದ ಹೊಸ ಕಾರ್ಯವಿಧಾನಗಳ ಬಗ್ಗೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರ ಆರೋಗ್ಯ ರಕ್ಷಣೆಗಾಗಿ ಡಬ್ಲ್ಯುಹೆಚ್‌ಒ ತನ್ನ 2014 ಕ್ಲಿನಿಕಲ್ ಮಾರ್ಗಸೂಚಿಗಳಲ್ಲಿ ‘ಕನ್ಯತ್ವ ಪರೀಕ್ಷೆ’ ಎಂದು ಕರೆಯಲ್ಪಡುವ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದು ಹೇಳಿದೆ.
ಹ್ಯೂಮನ್ ರೈಟ್ಸ್ ವಾಚ್ ಸಂಶೋಧಕ ಆಂಡ್ರಿಯಾಸ್ ಹರ್ಸೊನೊ ಇಂಡೋನೇಷ್ಯಾದ ನೌಕಾಪಡೆ ಮತ್ತು ವಾಯುಪಡೆಯ ಕಮಾಂಡರ್ ಗಳ ಮೇಲೆ ಕನ್ಯತ್ವ ಪರೀಕ್ಷೆ ನಿಲ್ಲಿಸುವಂತೆ ಒತ್ತಡ ಹೆಚ್ಚಿಸಲು ಕರೆ ನೀಡಿದ್ದರು.
ಇಂಡೋನೇಷ್ಯಾದ ಮಿಲಿಟರಿ ಮತ್ತು ಪೊಲೀಸ್ ಇಲಾಖೆಯಲ್ಲಿ ದಶಕಗಳವರೆಗೆ ಪರೀಕ್ಷೆ ನಡೆಯುತ್ತಿತ್ತು. ಪೊಲೀಸ್ ನೇಮಕಾತಿಯಲ್ಲಿ 2018 ರಲ್ಲಿ ಇಂತಹ ನಿಯಮ ಸ್ಥಗಿತಗೊಳಿಸಲಾಗಿತ್ತು ಎನ್ನಲಾಗಿದೆ.