ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ನಾಯಕರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ವಿವಾದಕ್ಕೀಡಾಗಿದ್ದ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೊಸ ವಿವಾದ ಸೃಷ್ಟಿಸಿದ್ದಾರೆ.
ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವಂತೆ ಆಗ್ರಹಿಸಿರುವ ಸಿ.ಟಿ.ರವಿ, ಇದೇ ವಿಚಾರವಾಗಿ ಮಾತನಾಡುತ್ತಾ, ಕಾಂಗ್ರೆಸ್ ನವರು ಬೇಕಿದ್ದರೆ ಹುಕ್ಕಾ ಬಾರ್ ತೆರೆಯಲಿ, ಕಾಂಗ್ರೆಸ್ ಕಚೇರಿಯಲ್ಲಿ ನೆಹರು ಹೆಸರಲ್ಲಿ ಹುಕ್ಕಾ ಬಾರ್ ಬೇಕಿದ್ದರೂ ತೆರೆಯಲಿ. ಇಂದಿರಾ ಕ್ಯಾಂಟೀನ್ ಬೇಕಾದರೂ ಮಾಡಲಿ. ಆದರೆ ಈಗಿರುವ ಇಂದಿರಾ ಕ್ಯಾಂಟಿನ್ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಬದಲಿಸಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರ ಮೀಸಲಾತಿ ಹಾಗೂ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ ಎಂಬುದು ಸಂಸತ್ತಿನಲ್ಲಿ ವಿಪಕ್ಷಗಳ ಅಸಹಕಾರದ ನಡುವೆಯೂ ಸರ್ಕಾರ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ 671 ಒಬಿಸಿ ಸಮುದಾಯಗಳು ನ್ಯಾಯಪಡೆಯಲು ಸಾಧ್ಯವಾಗುವಂತೆ ಮಾಡಿರುವುದೇ ಸಾಕ್ಷಿ ಎಂದರು.
ನಮ್ಮ ರಾಜಕೀಯ ವಿರೋಧಿಗಳು ಹಳೆ ಗ್ರಾಮಾಫೋನ್ ತಿರುಗಿಸುತ್ತಿದ್ದಾರೆ. ಅವರಲ್ಲಿ ಪ್ರಮುಖರು ಸಿದ್ದರಾಮಯ್ಯ, ಸಿದ್ದರಾಮಯ್ಯ ತಮ್ಮ ಸಾಫ್ಟ್ ವೇರ್ ಅಪ್ ಡೇಟ್ ಮಾಡಿಕೊಳ್ಳಬೇಕು. ನಾವು ಅಂಬೇಡ್ಕರ್ ವಿರೋಧಿಯಲ್ಲ, ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಿದ್ದು ಕಾಂಗ್ರೆಸ್. ನಾವು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದರು.