ಬೆಂಗಳೂರು: 2006 ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಜಾರಿಗೆ ತರಲಾಗಿದ್ದು, ಈ ಯೋಜನೆಯಡಿ ಬಿಪಿಎಲ್ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಬಾಂಡ್ ನೀಡಲಾಗುತ್ತದೆ.
ಬಡ್ಡಿದರ ಕಡಿಮೆಯಾದ ಕಾರಣ ಭಾರತೀಯ ಜೀವ ವಿಮಾ ನಿಗಮದೊಂದಿಗೆ ಇದ್ದ ಯೋಜನೆಯನ್ನು ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಯೋಜನೆಗೆ ಸೇರಿಸಲಾಗಿದೆ. ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ ಪ್ರತಿ ಮಗುವಿಗೆ ವರ್ಷಕ್ಕೆ ಮೂರು ಸಾವಿರ ರೂಪಾಯಿಯಂತೆ 15 ವರ್ಷಗಳ ಕಾಲ 45 ಸಾವಿರ ರೂಪಾಯಿ ಪಾವತಿಸಲಿದೆ. ಹೆಣ್ಣು ಮಗುವಿಗೆ 21 ವರ್ಷವಾದ ಸಂದರ್ಭದಲ್ಲಿ ಅಂದಿನ ಬಡ್ಡಿದರದ ಆಧಾರದ ಮೇಲೆ ಒಂದು ಲಕ್ಷ ರೂಪಾಯಿಗೂ ಹೆಚ್ಚು ಹಣ ನೀಡಲಾಗುವುದು.
ಹೆಣ್ಣುಮಕ್ಕಳು ಎಸ್ಎಸ್ಎಲ್ಸಿ ಅಥವಾ ಪಿಯುಸಿ ನಂತರದ ಶಿಕ್ಷಣಕ್ಕಾಗಿ ಈ ಹಣವನ್ನು ಪಡೆದುಕೊಳ್ಳಬಹುದು. ಜೊತೆಗೆ ಪೋಷಕರು ಕೂಡ ಹೆಚ್ಚುವರಿಯಾಗಿ ಹಣ ಕಟ್ಟಲು ಕೂಡ ಅವಕಾಶ ನೀಡಲಾಗಿದೆ. ಮೊದಲು ಹೆಣ್ಣು ಮಗು ಹುಟ್ಟಿದ ಒಂದು ವರ್ಷದೊಳಗೆ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಬೇಕೆಂದು ತಿಳಿಸಲಾಗಿತ್ತು. ಈಗ ಎರಡು ವರ್ಷಕ್ಕೆ ವಿಸ್ತರಿಸಲಾಗಿದೆ.
2020ರಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯನ್ನು ಎಲ್ಐಸಿಯಿಂದ ಅಂಚೆ ಇಲಾಖೆಗೆ ವರ್ಗಾಯಿಸಿ ಸುಕನ್ಯಾ ಸಮೃದ್ಧಿ ಯೋಜನೆಯೊಂದಿಗೆ ವಿಲೀನಗೊಳಿಸಲಾಗಿದೆ. ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ಧಿ ಯೋಜನೆ ಎಂದು ಹೆಸರು ಬದಲಾವಣೆ ಮಾಡಲಾಗಿದ್ದು, ಬಿಪಿಎಲ್ ಕುಟುಂಬದ ಹೆಣ್ಣು ಮಕ್ಕಳಿಗೆ ಬಾಂಡ್ ನೀಡಲಾಗುವುದು ಎಂದು ಹೇಳಲಾಗಿದೆ.