ನಗದು ವಿತ್ ಡ್ರಾ ಮಾಡಲು ನಾವು ಎಟಿಎಂಗೆ ಹೋಗ್ತೆವೆ. ಆದ್ರೆ ಕೆಲವೊಮ್ಮೆ ಎಟಿಎಂನಲ್ಲಿ ಹಣವಿರುವುದಿಲ್ಲ. ಅಗತ್ಯ ಸಂದರ್ಭದಲ್ಲಿ ನಗದು ಸಿಗದೆ ಹೋದಾಗ ಸಮಸ್ಯೆ ಎದುರಿಸಬೇಕಾಗುತ್ತದೆ. ಇನ್ಮುಂದೆ ಇಂಥ ಸಮಸ್ಯೆ ಬರುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಹೊಸ ನಿಯಮದ ಪ್ರಕಾರ, ಎಟಿಎಂನಲ್ಲಿ ನಗದು ಇಲ್ಲವೆಂದ್ರೆ ಇದ್ರ ಹೊಣೆಯನ್ನು ಬ್ಯಾಂಕ್ ಭರಿಸಬೇಕು.
ಅಕ್ಟೋಬರ್ 1, 2021 ರಿಂದ, ಆರ್ಬಿಐ, ಬ್ಯಾಂಕುಗಳ ಎಟಿಎಂಗಳು ತಿಂಗಳಲ್ಲಿ ಒಟ್ಟು 10 ಗಂಟೆಗಳಿಗಿಂತ ಹೆಚ್ಚು ಕಾಲ ಖಾಲಿಯಾಗಿದ್ದರೆ ದಂಡ ವಿಧಿಸಲಿದೆ. ನಿಗದಿತ ಸಮಯದಲ್ಲಿ ಎಟಿಎಂ ನಗದು ತುಂಬದಿದ್ದರೆ, ಬ್ಯಾಂಕ್ ಮೇಲೆ ದಂಡ ವಿಧಿಸಲಾಗುವುದು ಎಂದು ಆರ್ ಬಿ ಐ ಸುತ್ತೋಲೆಯಲ್ಲಿ ಹೇಳಿದೆ. ಎಟಿಎಂಗಳ ಮೂಲಕ ಸಾರ್ವಜನಿಕರಿಗೆ ನಗದು ಸಿಗಲಿ ಎಂಬ ಕಾರಣಕ್ಕೆ ಆರ್ಬಿಐ ಈ ನಿರ್ಧಾರ ತೆಗೆದುಕೊಂಡಿದೆ.
ಆರ್ಬಿಐ ಪ್ರಕಾರ, ತಿಂಗಳಲ್ಲಿ 10 ಗಂಟೆಗಳಿಗಿಂತ ಹೆಚ್ಚು ಕಾಲ ಎಟಿಎಂನಲ್ಲಿ ನಗದು ಇಲ್ಲದಿದ್ದರೆ, ಆ ಸಂದರ್ಭದಲ್ಲಿ 10,000 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಎಟಿಎಂಗೆ ನಗದು ಹಾಕಲು ಬ್ಯಾಂಕ್ ಯಾವುದೇ ಕಂಪನಿಗಳ ಸೇವೆಗಳನ್ನು ತೆಗೆದುಕೊಳ್ಳುತ್ತಿದ್ದರೂ, ಆಗಲೂ ಬ್ಯಾಂಕ್ ಸ್ವತಃ ದಂಡವನ್ನು ಪಾವತಿಸಬೇಕಾಗುತ್ತದೆ.