ಮುಂಬಯಿಯ ಜೀವನಾಡಿಯಾದ ಉಪನಗರ ರೈಲ್ವೇ ಸೇವೆಗಳು ಆಗಸ್ಟ್ 15ರಿಂದ ಮರು ಆರಂಭಗೊಳ್ಳಲಿದ್ದು, ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದವರು ಮಾತ್ರವೇ ಪ್ರಯಾಣಿಸಲು ಅವಕಾಶ ನೀಡಲಾಗಿದೆ.
“ಸದ್ಯದ ಮಟ್ಟಿಗೆ ಮುಂಬಯಿಯಲ್ಲಿ ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದ 19 ಲಕ್ಷ ಮಂದಿ ಇದ್ದು, ಒಂದು ಲಸಿಕೆ ಪಡೆದ 56 ಲಕ್ಷ ಮಂದಿ ಇದ್ದಾರೆ. ಮುಂಬಯಿ ಮಹಾನಗರ ವ್ಯಾಪ್ತಿಯನ್ನು ಸೇರಿಸಿಕೊಂಡಲ್ಲಿ ಕೋವಿಡ್‌ನ ಎರಡೂ ಲಸಿಕೆ ಪಡೆದವರ ಸಂಖ್ಯೆ 30 ಲಕ್ಷವಾಗಲಿದ್ದು, ಇವರಿಗೆ ಲೋಕಲ್ ರೈಲುಗಳಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗುವುದು,” ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಪ್ರಯಾಣಿಕರಿಗೆ ಅನಾನುಕೂಲವಾಗದಿರಲೆಂದು, ಅವರಿಗೆ ಸುದೀರ್ಘ ಸಾಲುಗಳಲ್ಲಿ ನಿಲ್ಲುವುದನ್ನು ತಪ್ಪಿಸಲು ಫೋಟೋ ಪಾಸ್‌ಗಳನ್ನು ಪಡೆಯಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ ಆಯುಕ್ತರು ಈ ಫೋಟೋ ಪಾಸ್‌ಗಳಲ್ಲಿ ಲಸಿಕೆ ಪಡೆದ ಪ್ರಮಾಣ ಪತ್ರಗಳು ಇರಲಿದ್ದು, ಲೋಕಲ್ ರೈಲುಗಳಲ್ಲಿ ಸಂಚರಿಸಲು ಅವರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.