ಬೆಂಗಳೂರು: ಕೊರೋನಾ ಕಾರಣದಿಂದಾಗಿ ಉದ್ಯಮ ವಲಯ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ.
ಕೊರೋನಾ ಹೊಡೆತದಿಂದ ಮೊದಲೇ ಸಂಕಷ್ಟದಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮ ನೆಲಕಚ್ಚಿದೆ. ಕಳೆದ ಎರಡು ವರ್ಷಗಳಿಂದ ತೆರಿಗೆ ಸಂಗ್ರಹದಲ್ಲಿ ನಿಗದಿತ ಗುರಿ ತಲುಪಲು ಹೆಣಗಾಡುತ್ತಿರುವ ಸರ್ಕಾರ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹೆಚ್ಚಳಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.
ಈ ಕುರಿತಂತೆ ಚರ್ಚಿಸಲು ಆಗಸ್ಟ್ 6 ರಂದು ಸಭೆ ನಿಗದಿಯಾಗಿದ್ದ ಸಭೆಯನ್ನು ನೂತನ ಸಚಿವ ಸಂಪುಟ ರಚನೆಯಾದ ಕಾರಣ ರದ್ದು ಮಾಡಲಾಗಿದೆ. ಈಗ ಮತ್ತೆ ಸಭೆ ನಡೆಸಿ ದರ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ.
ಮಾರುಕಟ್ಟೆ ದರಕ್ಕಿಂತ ಸರ್ಕಾರದ ದರ ಪಟ್ಟಿಯೇ ಹಲವು ಕಡೆ ಹೆಚ್ಚಾಗಿದೆ. ನೋಂದಣಿ ಮುದ್ರಾಂಕ ಶುಲ್ಕ ಹೆಚ್ಚಳ ಬಡ, ಮಧ್ಯಮವರ್ಗದವರಿಗೆ ಹೊರೆಯಾಗಲಿದೆ. ಮನೆ, ಸೈಟು ಖರೀದಿಸಲು ಕಷ್ಟದ ಪರಿಸ್ಥಿತಿ ಇದ್ದು, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆಯುತ್ತಿದೆ. ಇದೇ ವೇಳೆ ತೆರಿಗೆ ಸಂಗ್ರಹ ಹೆಚ್ಚಳದ ಉದ್ದೇಶದಿಂದ ನೋಂದಣಿ ಮುದ್ರಾಂಕ ಶುಲ್ಕ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.