ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೇ ಅಸಮಾಧಾನ ಸ್ಫೋಟಗೊಂಡಿದ್ದು, ಸಚಿವ ಆನಂದ್ ಸಿಂಗ್ ಹಾಗೂ ಶ್ರೀರಾಮುಲು ತಮಗೆ ಸಿಕ್ಕ ಖಾತೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪರಿಸರ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಆನಂದ್ ಸಿಂಗ್, ನಾನು ನಿರೀಕ್ಷೆ ಮಾಡಿದ ಖಾತೆ ನನಗೆ ಸಿಕ್ಕಿಲ್ಲ. ನಾನು ಬೇರೆ ಖಾತೆ ನೀಡುವಂತೆ ಸಿಎಂ ಬಳಿ ಕೇಳಿದ್ದೆ. ಆದರೆ ಈಗ ಪರಿಸರ ಮತ್ತು ಪ್ರವಾಸೋದ್ಯಮ ಖಾತೆ ನೀಡಿದ್ದಾರೆ. ನಾನು ಕೇಳಿದ ಖಾತೆ ಕೊಟ್ಟಿಲ್ಲ ಎಂಬ ನೋವಿದೆ. ನಾಳೆ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮತ್ತೊಮ್ಮೆ ಮನವಿ ಮಾಡುತ್ತೇನೆ. ಒಂದು ವೇಳೆ ಖಾತೆ ಬದಲಿಸದಿದ್ದರೆ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
BIG NEWS: ನೂತನ ಸಚಿವರಿಗೆ ಖಾತೆ ಹಂಚಿಕೆ; ಯಾರಿಗೆ ಯಾವ ಖಾತೆ….? ಇಲ್ಲಿದೆ ಮಾಹಿತಿ
ಈ ನಡುವೆ ಸಾರಿಗೆ ಸಚಿವ ಶ್ರೀರಾಮುಲು ಕೂಡ ತಮಗೆ ಸಿಕ್ಕಿರುವ ಸಾರಿಗೆ ಇಲಾಖೆ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಡಿಸಿಎಂ ಹುದ್ದೆಯೂ ನೀಡಿಲ್ಲ, ತಾನು ಕೇಳಿದ ಖಾತೆಯನ್ನೂ ನೀಡಿಲ್ಲ. ಇದರಿಂದ ಬೇಸರವಾಗಿದೆ. ಸಿಎಂ ಜೊತೆ ಮತ್ತೊಮ್ಮೆ ಚರ್ಚಿಸುತ್ತೇನೆ ಎಂದು ಶ್ರೀರಾಮುಲು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಸಚಿವರ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಕೆಲವರಿಗೆ ಖಾತೆ ಹಂಚಿಕೆ ಅಸಮಾಧಾನ ತರುವುದು ಸಹಜ. ಆನಂದ್ ಸಿಂಗ್ ನನ್ನ ಒಳ್ಳೆಯ ಸ್ನೇಹಿತ. ಹಾಗಾಗಿ ಕರೆದು ಮಾತನಾಡುತ್ತೇನೆ. ಎಲ್ಲಾ ಸಚಿವರು ತಮ್ಮ ತಮ್ಮ ಖಾತೆಯನ್ನು ಉತ್ತಮವಾಗಿ ನಿಭಾಯಿಸಲಿ ಎಂದು ಹೇಳಿದರು.