ದೇಶದಲ್ಲಿ ಕೋವಿಡ್ ಲಸಿಕೆ ಕಾರ್ಯಕ್ರಮ ಜೋರಾಗಿ ಸಾಗುತ್ತಿದ್ದು, ಇದೀಗ ತಾನೇ 50 ಕೋಟಿ ಗಡಿ ದಾಟಿದೆ. ಇಲ್ಲಿವರೆಗೂ 50,03,48,866 ದೇಶವಾಸಿಗಳಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಪ್ರಕಟಣೆಯಿಂದ ತಿಳಿದುಬಂದಿದೆ.
ಆಗಸ್ಟ್ 6ರ ಒಂದೇ ದಿನ 43.29 ಲಕ್ಷ ಲಸಿಕೆಗಳನ್ನು ನೀಡಲಾಗಿದೆ. 18-44ರ ವಯೋಮಾನದ ಮಂದಿಗೆ 18.35 ಕೋಟಿ ಲಸಿಕೆಗಳನ್ನು ಹಾಕಲಾಗಿದೆ. ಬಳಸದೇ ಇರುವ ಸುಮಾರು 2.30 ಕೋಟಿ ಲಸಿಕೆಗಳು ಅನೇಕ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಲಭ್ಯವಿವೆ ಎಂದು ಸರ್ಕಾರ ತಿಳಿಸಿದೆ.
ಸಿಂಗಲ್ ಡೋಸ್ ಕೋವಿಡ್ ಲಸಿಕೆ ತುರ್ತು ಬಳಕೆಗೆ ಅನುಮತಿ ಕೋರಿದ ಜಾನ್ಸನ್ & ಜಾನ್ಸನ್
“18-44 ವರ್ಷ ವಯಸ್ಸಿನವರ ಪೈಕಿ ಮೊದಲ ಡೋಸ್ ಆಗಿ 22,93,781 ಲಸಿಕೆಗಳನ್ನು ಕೊಡಲಾಗಿದ್ದು, 4,32,281 ಲಸಿಕೆಗಳನ್ನು ಎರಡನೇ ಡೋಸ್ ರೂಪದಲ್ಲಿ ಶುಕ್ರವಾರದ ಒಂದೇ ದಿನ ನೀಡಲಾಗಿದೆ. ಮೂರನೇ ಹಂತದ ಲಸಿಕಾ ಕಾರ್ಯಕ್ರಮ ಆರಂಭಗೊಂಡಾಗಿನಿಂದ ಇಲ್ಲಿವರೆಗೂ ಒಟ್ಟಾರೆಯಾಗಿ ಈ ವಯೋಮಾನದ 17,23,20,394 ಮಂದಿ ಮೊದಲ ಲಸಿಕೆ ಹಾಗೂ 1,12,56,317 ಮಂದಿ ಎರಡನೇ ಲಸಿಕೆಯನ್ನು ಪಡೆದಿದ್ದಾರೆ” ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
“ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತ ಇನ್ನಷ್ಟು ಬಲ ಪಡೆಯುತ್ತಿದೆ. ಲಸಿಕೆಗಳ ಸಂಖ್ಯೆ 50 ಕೋಟಿಯ ಗಡಿ ದಾಟಿದೆ. ಸರ್ವರಿಗೂ ಉಚಿತ ಲಸಿಕೆ ಅಭಿಯಾನದಡಿ ಈ ಸಂಖ್ಯೆಗಳನ್ನು ಇನ್ನಷ್ಟು ದೊಡ್ಡದು ಮಾಡಲು ನಾವು ಇಚ್ಛಿಸುತ್ತೇವೆ” ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.