ಅಮೆರಿಕಾ ಔಷಧಿ ಕಂಪನಿ ಜಾನ್ಸನ್ ಆಂಡ್ ಜಾನ್ಸನ್ ತನ್ನ ಲಸಿಕೆಯ ತುರ್ತು ಬಳಕೆಗೆ ಭಾರತ ಸರ್ಕಾರದ ಒಪ್ಪಿಗೆ ಕೇಳಿದೆ. ಭಾರತ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದಲ್ಲಿ, ಭಾರತಕ್ಕೆ ಕೊರೊನಾದ ನಾಲ್ಕು ಲಸಿಕೆ ಸಿಕ್ಕಂತಾಗುತ್ತದೆ. ಪ್ರಸ್ತುತ ಭಾರತದಲ್ಲಿ ಕೋವ್ಯಾಕ್ಸಿನ್, ಕೋವಿಶೀಲ್ಡ್ ಮತ್ತು ರಷ್ಯಾದ ಲಸಿಕೆ ಸ್ಪುಟ್ನಿಕ್-ವಿ ಲಭ್ಯವಿದೆ. ಕೋವ್ಯಾಕ್ಸಿನ್, ಕೋವಿಶೀಲ್ಡ್ ಮತ್ತು ಸ್ಪುಟ್ನಿಕ್-ವಿ ಇವೆರಡೂ ಡಬಲ್ ಡೋಸ್ ಲಸಿಕೆಗಳು.
130 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಈವರೆಗೆ 49.53 ಕೋಟಿಗಿಂತ ಹೆಚ್ಚು ಡೋಸ್ಗಳನ್ನು ನೀಡಲಾಗಿದೆ. ಜಾನ್ಸನ್ ಆಂಡ್ ಜಾನ್ಸನ್ ಲಸಿಕೆಯನ್ನು ತುರ್ತು ಬಳಕೆಗೆ ಅನುಮೋದಿಸಿದರೆ, ಇದು ಭಾರತದಲ್ಲಿ ಬಳಸಲ್ಪಡುವ ಮೊದಲ ಏಕ-ಡೋಸ್ ಲಸಿಕೆಯಾಗಲಿದೆ.
ಏಕ-ಡೋಸ್ ಕೋವಿಡ್ -19 ಲಸಿಕೆಯನ್ನು ಭಾರತಕ್ಕೆ ತರಲು ಸಿದ್ಧವಾಗಿರುವುದಾಗಿ ಕಂಪನಿ ಹೇಳಿದೆ. ಆಗಸ್ಟ್ 5, 2021 ರಂದು ಭಾರತ ಸರ್ಕಾರಕ್ಕೆ ಈ ಕುರಿತು ಅರ್ಜಿ ಸಲ್ಲಿಸಲಾಗಿದೆ ಎಂದು ಕಂಪನಿ ವಕ್ತಾರರು ಹೇಳಿದ್ದಾರೆ. ಹೆಚ್ಚು ಜನಸಂಖ್ಯೆಯಿರುವ ಭಾರತದಲ್ಲಿ ಎರಡು ಡೋಸ್ ಲಸಿಕೆಗಿಂತ ಒಂದು ಡೋಸ್ ಲಸಿಕೆ ಅತ್ಯುತ್ತಮ. ಬೇಗ ಭಾರತೀಯರಿಗೆ ಲಸಿಕೆ ಲಭ್ಯವಾಗುತ್ತದೆ.