ಕೊರೊನಾ ವೈರಸ್ ದೇಶದಾದ್ಯಂತ ಅನೇಕರ ಪ್ರಾಣ ತೆಗೆದಿದೆ. ಕೊರೊನಾ ಸಾಂಕ್ರಾಮಿಕದಿಂದಾಗಿ ಅನೇಕ ಮಕ್ಕಳು ಅನಾಥರಾಗಿದ್ದಾರೆ. ಅನಾಥ ಮಕ್ಕಳ ನೆರವಿಗೆ ಮೋದಿ ಸರ್ಕಾರ ಬಂದಿದೆ. ಕೊರೊನಾದಿಂದ ಅನಾಥವಾದ ಮಕ್ಕಳಿಗೆ ಮೋದಿ ಸರ್ಕಾರ 5 ಲಕ್ಷ ರೂಪಾಯಿ ಉಚಿತ ಆರೋಗ್ಯ ವಿಮೆ ನೀಡ್ತಿದೆ. ಪಿಎಂ ಕೇರ್ಸ್ ನಿಧಿಯಿಂದ ಪ್ರೀಮಿಯಂ ತುಂಬಲಾಗುವುದು.
ಕೊರೊನಾದಿಂದ ಬಳಲುತ್ತಿರುವ ಮಕ್ಕಳ ಆರೈಕೆಗಾಗಿ ತೆಗೆದುಕೊಂಡ ಕ್ರಮಗಳ ಭಾಗವಾಗಿ, 18 ವರ್ಷ ವಯಸ್ಸಿನ ಮಕ್ಕಳಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ 5 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆಯನ್ನು ನೀಡಲಾಗುತ್ತದೆ. ಇದನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ಘೋಷಿಸಿದ್ದಾರೆ.
ಅನುರಾಗ್ ಠಾಕೂರ್, ಟ್ವೀಟ್ ಮೂಲಕ ಈ ವಿಷ್ಯವನ್ನು ತಿಳಿಸಿದ್ದಾರೆ. ಕೊರೊನಾ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡ 18 ವರ್ಷದೊಳಗಿನ ಮಕ್ಕಳಿಗೆ ಪ್ರತಿ ತಿಂಗಳು ಪರಿಹಾರ ನೀಡಲಾಗುವುದು. 23 ವರ್ಷ ವಯಸ್ಸಿಗೆ ಈ ಮಕ್ಕಳಿಗೆ 10 ಲಕ್ಷ ರೂಪಾಯಿ ಸಹಾಯಧನ ಸಿಗಲಿದೆ.
ಪ್ರಧಾನಿ ನರೇಂದ್ರ ಮೋದಿ ಮೇ 29ರಂದು ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯನ್ನು ಶುರು ಮಾಡಿದ್ದರು. ಮಾರ್ಚ್ 11, 2020ರ ನಂತ್ರ ಪಾಲಕರನ್ನು ಕಳೆದುಕೊಂಡ ಮಕ್ಕಳನ್ನು ಪೋಷಣೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.