ನವದೆಹಲಿ: ಸಮಗ್ರ ಶಿಕ್ಷಣ ಅಭಿಯಾನವನ್ನು ಇನ್ನು 5 ವರ್ಷ ವಿಸ್ತರಿಸಲು ಕೇಂದ್ರ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ ಕುರಿತಾಗಿ ಮಾಹಿತಿ ನೀಡಿದ್ದು, ಸಮಗ್ರ ಶಿಕ್ಷಣ ಅಭಿಯಾನವನ್ನು ಇನ್ನು 5 ವರ್ಷ ಮುಂದುವರಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ಹೇಳಿದ್ದಾರೆ. 2021 ರ ಏಪ್ರಿಲ್ 1 ರಿಂದ 2020 ರ ಮಾರ್ಚ್ 31 ರವರೆಗೆ ಸಮಗ್ರ ಶಿಕ್ಷಣ ಅಭಿಯಾನ ಯೋಜನೆ ಕಾರ್ಯ ನಿರ್ವಹಿಸಲಿದೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ, ವಿದ್ಯಾರ್ಥಿನಿಯರ ಹಾಸ್ಟೆಲ್ ಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಯಂತ್ರ ಅಳವಡಿಕೆ, ಪ್ರಾಥಮಿಕ ಶಾಲೆಗಳಲ್ಲಿ ಹೊಸ ಕಲಿಕಾ ವಿಷಯ ಸೇರ್ಪಡೆ, ಸಮಗ್ರ ಕಲಿಕಾ ಕಾರ್ಡ್ ವಿತರಣೆ, ಕಸ್ತೂರಬಾ ಗಾಂಧಿ ಬಾಲಕಿಯರ ಶಾಲೆಗಳನ್ನು 12 ನೇ ತರಗತಿವರೆಗೆ ಉನ್ನತೀಕರಿಸಲಾಗುವುದು ಎಂದು ಹೇಳಲಾಗಿದೆ.
ದೇಶಾದ್ಯಂತ 11.6 ಲಕ್ಷ ಶಾಲೆಗಳ 15.6 ಕೋಟಿ ವಿದ್ಯಾರ್ಥಿಗಳು ಹಾಗೂ ಸುಮಾರು 57 ಲಕ್ಷ ಶಿಕ್ಷಕರು ಸಮಗ್ರ ಶಿಕ್ಷಣ ಅಭಿಯಾನ ಯೋಜನೆ ವ್ಯಾಪ್ತಿಗೆ ಬರುತ್ತಾರೆ ಎಂದು ಸಚಿವರು ತಿಳಿಸಿದ್ದಾರೆ.