ದೆವ್ವ, ಭೂತ ನಿಜವಾಗಿ ಇದ್ಯಾ ಎಂಬ ಪ್ರಶ್ನೆಗೆ ಇನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ. ಆದ್ರೆ ಕೆಲವರು ಭೂತ, ಪಿಶಾಚಿ ಹೆಸರು ಕೇಳಿದ್ರೆ ಬೆವರ್ತಾರೆ. ಯಾವುದೇ ವೈಜ್ಞಾನಿಕ ಆಧಾರವಿಲ್ಲದ ಕೆಲವು ಘಟನೆಗಳು ನಮ್ಮ ಸುತ್ತ ಮುತ್ತ ನಡೆಯುತ್ತಲೇ ಇರುತ್ತೆ. ಸಾಮಾನ್ಯವಾಗಿ ಪಾಳು ಬಿದ್ದ ಬಂಗಲೆ, ಹಳೆ ರಸ್ತೆ, ಹಳೆಯ ಕಾಲದ ಮಹಲು, ಕಾಡು ಇದರಲ್ಲೇ ಈ ಕಾಣದ ದುಷ್ಟ ಶಕ್ತಿಗಳು ವಾಸಿಸುತ್ತವೆ ಎಂಬ ನಂಬಿಕೆಯಿದೆ. ಪ್ರಪಂಚದ ಭಯಾನಕ ರೈಲ್ವೆ ನಿಲ್ದಾಣಗಳಲ್ಲಿ ಭೂತದ ಕಾಟ ಹೆಚ್ಚಿದೆಯಂತೆ.
ಬ್ರಿಟನ್ನ ಅಡಿಸ್ಕಾಂಬೆ ರೈಲು ನಿಲ್ದಾಣ : ಈ ರೈಲ್ವೆ ನಿಲ್ದಾಣವನ್ನ 1906ರಲ್ಲಿ ಕಟ್ಟಲಾಗಿತ್ತು. ಈ ರೈಲ್ವೆ ನಿಲ್ದಾಣದ ವಿಶೇಷತೆ ಏನಂದ್ರೆ ಇದು ಕೇವಲ 2 ಕೌಂಟರ್ಗಳನ್ನ ಮಾತ್ರ ಹೊಂದಿತ್ತು. ಕಟ್ಟಡವೇ ಇಲ್ಲದೆ, ಮರದಿಂದ ಮಾಡಿದ ಕಟ್ಟೆಯ ಮೇಲೆಯೇ ನಿಲ್ದಾಣವನ್ನ ಆರಂಭಿಸಲಾಗಿತ್ತು. ಇಲ್ಲಿ ಆಗಾಗ ರೈಲು ಚಾಲಕನ ಭೂತ ಓಡಾಡಿರೋದನ್ನ ಸ್ಥಳೀಯರು ನೋಡಿದ್ದಾರೆ. ಇಲ್ಲಿ ಆಗಾಗ ಪ್ರೇತದ ರೂಪದ ಮಸುಕಾದ ನೆರಳನ್ನು ಜನರು ನೋಡಿದ್ದಾರೆ. 2001ರಲ್ಲಿ ಈ ನಿಲ್ದಾಣ ನೆಲಸಮ ಮಾಡಿದಾಗಲೂ ಈ ಪ್ರೇತದ ನೆರಳು ಗೋಚರಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಬಿಶನ್ ಸ್ಟೇಷನ್, ಸಿಂಗಾಪುರ : ಸಿಂಗಾಪುರದ ಈ ನಿಲ್ದಾಣ ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ನಿಲ್ದಾಣವನ್ನು ಸ್ಮಶಾನದಲ್ಲಿ ನಿರ್ಮಿಸಲಾಗಿದೆ. 1987ರಲ್ಲಿ ಈ ರೈಲ್ವೆ ನಿಲ್ದಾಣವನ್ನ ನಿರ್ಮಾಣ ಮಾಡಲಾಗಿದೆ. 1990 ರ ಒಂದು ದಿನ ರೈಲಿನಿಂದ ಇಳಿದ ಮಹಿಳೆಯೊಬ್ಬಳಿಗೆ, ಆಕೆಯ ಕೈಯನ್ನ ಯಾರೋ ಹಿಡಿದಿರೋ ಅನುಭವವಾಗಿದೆ. ಅದೇ ಸಮಯದಲ್ಲಿ, ಇಲ್ಲಿ ಕೆಲಸ ಮಾಡುವ ಉದ್ಯೋಗಿಯೊಬ್ಬರು, ಶವಪೆಟ್ಟಿಗೆಯನ್ನು ಟ್ರ್ಯಾಕ್ ಮೇಲೆ ಚಲಿಸುತ್ತಿರುವುದನ್ನು ನೋಡಿದ್ದಾರೆ.
ಕಾಓಬಾವೊ ರೋಡ್ ಸಬ್ವೇ ಸ್ಟೇಶನ್, ಚೀನಾ : ಇದು ಬಹುಶಃ ವಿಶ್ವದ ಅತ್ಯಂತ ಭಯಾನಕ ನಿಲ್ದಾಣ ಎಂದರೂ ತಪ್ಪಾಗಲಿಕ್ಕಿಲ್ಲ. ಶಾಂಘೈ ಸಬ್ವೇ ಸ್ಟೆಶನ್ ಲೈನ್ 1ರಲ್ಲಿ ಕಾಓಬಾವೊ ರಸ್ತೆ ಸಬ್ವೇ ನಿಲ್ದಾಣವನ್ನು ನಿರ್ಮಿಸಲಾಗಿದೆ. ಇಲ್ಲಿ ಕೆಲವೊಮ್ಮೆ ರೈಲು ಒಮ್ಮಿಂದೊಮ್ಮೆ ನಿಂತು ಬಿಡುತ್ತೆ. ಮತ್ತು ಕೆಲವೊಮ್ಮೆ ಪ್ರೇತದ ನೆರಳು ಕೂಡ ರಾತ್ರಿಯಲ್ಲಿ ಓಡಾಡೋದು ಕಂಡು ಬಂದಿದೆ. ಅಷ್ಟೆ ಅಲ್ಲ ಇಲ್ಲಿ ಕೆಲವರು ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ.
ಬೇಂಗುಂಕೋಡರ್, ಭಾರತ: ಕೋಲ್ಕತ್ತಾದಿಂದ 161 ಕಿಲೋಮೀಟರ್ ದೂರದಲ್ಲಿರುವ ಪುಟ್ಟ ಹಳ್ಳಿ ಬೇಗುಂಕೋಡೋರ್. ರೈಲ್ವೆ ಕೆಲಸಗಾರ, ನಿಲ್ದಾಣದಲ್ಲಿ ಯಾರನ್ನೋ ನೋಡಿ ಮರುದಿನ ಸಾವನ್ನಪ್ಪಿದ. ಬಿಳಿ ಸೀರೆಯನ್ನು ಧರಿಸಿದ ಮಹಿಳೆ ಕೆಲವೊಮ್ಮೆ ಟ್ರ್ಯಾಕ್ ಮೇಲೆ ಮತ್ತು ಕೆಲವೊಮ್ಮೆ ಪ್ಲಾಟ್ ಫಾರ್ಮ್ ಮೇಲೆ ಓಡುತ್ತಾಳೆ ಎಂದು ಇಲ್ಲಿ ವಾಸಿಸುವ ಜನರು ಆಗಾಗ ಹೇಳ್ತಾನೇ ಇರುತ್ತಾರೆ.
ಮೆಕ್ವೆರಿ ಫೀಲ್ಡ್ ರೈಲ್ವೆ ಸ್ಟೆಶನ್, ಆಸ್ಟ್ರೇಲಿಯಾ : ಆಸ್ಟ್ರೇಲಿಯಾದ ಸಿಡ್ನಿಯ ನೈರುತ್ಯದಲ್ಲಿರುವ ನ್ಯೂ ಸೌತ್ ವೇಲ್ಸ್ ನಲ್ಲಿ ಈ ರೈಲ್ವೆ ನಿಲ್ದಾಣವಿದೆ. ಪ್ರತಿ ರಾತ್ರಿ ಇಲ್ಲಿ ಓರ್ವ ಯುವತಿಯ ದೆವ್ವ ತಿರುಗುತ್ತಿರುತ್ತೆ ಅಂತ ಹೇಳುತ್ತಾರೆ. ನೃತ್ಯ ಮಾಡ್ತಾ ಕೋಗ್ತಾಳೆಂದು ಹೇಳಲಾಗುತ್ತದೆ.
ಪ್ಯಾಂಟೋನ್ಸ್ ಮೆಟ್ರೋ ನಿಲ್ದಾಣ, ಮೆಕ್ಸಿಕೋ : ಈ ಕುಖ್ಯಾತ ಪ್ಯಾಂಟೋನ್ಸ್ ಮೆಟ್ರೋ ನಿಲ್ದಾಣವು ಮೆಕ್ಸಿಕೋ ನಗರದ ಸೆಕೆಂಡ್ ಲೈನ್ ನಲ್ಲಿದೆ. ಈ ನಿಲ್ದಾಣದ ಬಳಿ ಎರಡು ಸ್ಮಶಾನಗಳಿವೆ. ಇಲ್ಲಿನ ಸುರಂಗಗಳಿಂದ ಯಾರೋ ಕೂಗುವ ಶಬ್ದ ಕೇಳಿಸುತ್ತದೆ. ಕೆಲವು ಜನರು ಅನೇಕ ಬಾರಿ ನೆರಳು ಓಡಾಡೋದನ್ನ ನೋಡಿದ್ದಾರೆ. ಜೊತೆಗೆ ಯಾರೋ ಗೋಡೆಗಳ ಮೇಲೆ ನಡೆಯೋ ಹಾಗೆಯೂ ಅನಿಸಿದ್ದು ಇದೆ.
ಯೂನಿಯನ್ ಸ್ಟೇಷನ್, ಫೀನಿಕ್ಸ್, ಯುಎಸ್ಎ : ಈ ನಿಲ್ದಾಣವನ್ನು 1995 ರಲ್ಲಿ ಮುಚ್ಚಲಾಯಿತು. ಇಲ್ಲಿನ ರೈಲ್ವೆ ಉದ್ಯೋಗಿಗಳು ಆಗಾಗ ಕಾಣಿಸುವ ದೆವ್ವಕ್ಕೆ ಪ್ರೀತಿಯಿಂದ ‘ಫ್ರೆಡ್’ ಎಂದು ಹೆಸರಿಟ್ಟಿದ್ದಾರೆ. ಫ್ರೆಡ್ ದೆವ್ವ ಕಾಣಿಸುವ ಕೋಣೆಯ ಬಳಿಯೂ ಯಾರೂ ಹೋಗೋಲ್ಲ.
ವಾಟರ್ಫ್ರಂಟ್ ಸ್ಟೇಷನ್, ಕೆನಡಾ : ಈ ನಿಲ್ದಾಣವು ಕೆನಡಾದ ವ್ಯಾಂಕೋವರ್ನಲ್ಲಿರುವ ಪಾಳು ಬಿದ್ದ ಸ್ಥಳ. ಇದು ಬಹಳ ಮುಖ್ಯವಾದ ಇಂಟರ್ಚೇಂಜ್ ಜಂಕ್ಷನ್ ಕೂಡ ಆಗಿದೆ. ಇದೇ ನಿಲ್ದಾಣದಿಂದ ರೈಲುಗಳ ಮಾರ್ಗ ಬದಲಾಯಿಸಲಾಗುತ್ತೆ. ಇದೇ ನಿಲ್ದಾಣದ ಕಾವಲುಗಾರರು ರಾತ್ರಿಯಲ್ಲಿ ದೆವ್ವಗಳ ನೆರಳನ್ನು ನೋಡಿದ್ದಾರೆ. ರೈಲ್ವೇ ಉದ್ಯೋಗಿಯ ದೆವ್ವ ಕೂಡ ಇಲ್ಲಿ ಟ್ರ್ಯಾಕ್ ನಲ್ಲಿ ಕಾಣುತ್ತಿದೆ.