ನವದೆಹಲಿ: ನಾಳೆ ಸಂಜೆ 5 ಗಂಟೆಗೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಬಿಜೆಪಿ ಹೈಕಮಾಂಡ್ ಇಂದು ನೂತನ ಸಚಿವರ ಪಟ್ಟಿಯನ್ನು ರವಾನೆ ಮಾಡಲಿದೆ. ನಾಳೆ 24 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.
ನೂತನ ಸಚಿವರ ಪಟ್ಟಿ ಬಹುತೇಕ ಫೈನಲ್ ಆಗಿದ್ದು, ಹೈಕಮಾಂಡ್ ನಿಂದಲೇ ಸಚಿವರ ಪಟ್ಟಿಯನ್ನು ರವಾನೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಶಾಸಕರಿಗೆ ಕರೆ ಮಾಡಿ ಬೆಂಗಳೂರಿಗೆ ಆಗಮಿಸಲು ಸೂಚನೆ ನೀಡಲಾಗುವುದು.
ಸಿಎಂ ಬೊಮ್ಮಾಯಿ ಹಾಗೂ ಕೇಂದ್ರ ನಾಯಕರು, ರಾಜ್ಯ ಬಿಜೆಪಿ ನಾಯಕರು ಸೇರಿ ಪಟ್ಟಿಯನ್ನು ಸಿದ್ಧಪಡಿಸಿದ್ದು, ಮೊದಲ ಹಂತದಲ್ಲಿ 24 ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.