ಅಕ್ರಮ ಮದ್ಯ ವ್ಯಾಪಾರ ಮಾಡುವುದು ಇನ್ಮುಂದೆ ಸುಲಭವಲ್ಲ. ಮಧ್ಯಪ್ರದೇಶದಲ್ಲಿ ಅಕ್ರಮ ಮದ್ಯ ವ್ಯಾಪಾರ ಮಾಡುವವರ ವಿರುದ್ಧ ಕಠಿಣ ಕಾನೂನು ಜಾರಿಗೆ ತರಲಾಗ್ತಿದೆ. ಅಕ್ರಮ ಮದ್ಯ ಮಾರಾಟಗಾರರಿಗೆ ಮರಣದಂಡನೆ ಶಿಕ್ಷೆಯಾಗಲಿದೆ.
ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೊಸ ಅಬಕಾರಿ ಕಾನೂನಿನ ಕರಡನ್ನೂ ಅನುಮೋದಿಸಲಾಗಿದೆ. ಆಗಸ್ಟ್ 9 ರಿಂದ ಆರಂಭವಾಗುವ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿದೆ. ಕ್ಯಾಬಿನೆಟ್ ನಲ್ಲಿ ಅನುಮೋದನೆ ಪಡೆದಿರುವ ಕಟ್ಟುನಿಟ್ಟಾದ ಅಬಕಾರಿ ಕಾನೂನಿನ ಪ್ರಕಾರ, ಅಕ್ರಮ ಮದ್ಯ ವ್ಯಾಪಾರ ಮಾಡುವವರಿಗೆ ಮರಣದಂಡನೆ ಶಿಕ್ಷೆಯಾಗಲಿದೆ.
ಮಸೂದೆಯ ನಿಬಂಧನೆಗಳ ಪ್ರಕಾರ, ವಿಷಪೂರಿತ ಮದ್ಯ ಮಾರಾಟ ಮಾಡುವವರಿಗೆ ಜೀವಾವಧಿ ಶಿಕ್ಷೆ ಮತ್ತು ಮರಣದಂಡನೆಗೆ ಅವಕಾಶ ನೀಡಲಾಗಿದೆ. ಈಗಿದ್ದ 10 ವರ್ಷಗಳ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಹೆಚ್ಚಿಸಲಾಗಿದೆ. ಅಕ್ರಮ ಮದ್ಯ ಮಾರಾಟದ ದಂಡದ ಮೊತ್ತವನ್ನು 10 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಹೊಸ ಅಬಕಾರಿ ಅಧಿಕಾರಿಯ ನೇಮಕಾತಿಗೆ ಅವಕಾಶ ನೀಡಲಾಗಿದೆ. ಅಬಕಾರಿ ತಂಡದ ಮೇಲೆ ದಾಳಿ ಮಾಡಿದವರನ್ನು ವಾರಂಟ್ ಇಲ್ಲದೆ ಬಂಧಿಸಬಹುದಾಗಿದೆ.
ಸರ್ಕಾರದ ಹೊಸ ಕಾನೂನನ್ನು ಪ್ರತಿಪಕ್ಷಗಳು ಪ್ರಶ್ನಿಸಿವೆ. ಹೊಸ ಕಾನೂನು, ಮಾಫಿಯಾವನ್ನು ಕೊನೆಗೊಳಿಸಲು ಸಾಧ್ಯವಿಲ್ಲ ಎಂದಿವೆ.