ಮಕ್ಕಳು ಜನಿಸುವ ಮೊದಲೇ ಅವರ ಭವಿಷ್ಯದ ಬಗ್ಗೆ ಯೋಚಿಸುವ ಪಾಲಕರಿದ್ದಾರೆ. ಮಕ್ಕಳ ಉಳಿತಾಯ ಯೋಜನೆಗಳು ಸಾಕಷ್ಟಿವೆ. ಆದ್ರೆ ಸುರಕ್ಷಿತ ಸ್ಥಳದಲ್ಲಿ ಹೂಡಿಕೆ ಮಾಡಿದ್ರೆ ಮಕ್ಕಳ ಭವಿಷ್ಯಕ್ಕೆ ಒಳ್ಳೆ ಅಡಿಪಾಯ ನೀಡಿದಂತೆ. ಮಕ್ಕಳಿಗೆ 18 ವರ್ಷವಾಗ್ತಿದ್ದಂತೆ ಹಣದ ಸಹಾಯ ಬೇಕೆನ್ನುವವರು ಸಾರ್ವಜನಿಕ ಭವಿಷ್ಯ ನಿಧಿ ಖಾತೆಯನ್ನು ಆರಿಸಿಕೊಳ್ಳಬಹುದು. ಅಪ್ರಾಪ್ತ ಮಗುವಿನ ಹೆಸರಿನಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಬಹುದು. ಮಗುವಿಗೆ 2 ಅಥವಾ 3 ವರ್ಷ ಖಾತೆ ತೆರೆದರೆ, 18 ವರ್ಷ ತುಂಬಿದ ನಂತರ ದೊಡ್ಡ ಮೊತ್ತ ನಿಮ್ಮ ಕೈಸೇರಲಿದೆ.
ಪಿಪಿಎಫ್ ಖಾತೆಯನ್ನು ಅಂಚೆ ಕಚೇರಿ ಅಥವಾ ಯಾವುದೇ ಬ್ಯಾಂಕ್ ನಲ್ಲಿ ತೆರೆಯಬಹುದು. ಪಿಪಿಎಫ್ ಖಾತೆಯ ಲಾಕ್ ಇನ್ ಅವಧಿ 15 ವರ್ಷಗಳು. ಮಗುವಿನ ಪಿಪಿಎಫ್ ಖಾತೆಯನ್ನು 3 ಅಥವಾ 4 ವರ್ಷ ವಯಸ್ಸಿನಲ್ಲಿ ತೆರೆದರೆ, ಆತನಿಗೆ 18 ಅಥವಾ 19 ವರ್ಷ ವಯಸ್ಸಾದಾಗ ಪಕ್ವವಾಗುತ್ತದೆ. ಅಗತ್ಯವಿದ್ದರೆ ಹಣವನ್ನು ಹಿಂಪಡೆಯಬಹುದು. ಖಾತೆಯನ್ನು ಮುಂದಕ್ಕೆ ಕೊಂಡೊಯ್ಯಲು ಬಯಸಿದರೆ ಅದನ್ನು 5-5 ವರ್ಷಗಳ ಅವಧಿಗೆ ಮುಂದುವರಿಸಲು ಸಾಧ್ಯವಾಗುತ್ತದೆ.
ಪಿಪಿಎಫ್ ಯೋಜನೆಯಡಿ ದಿನಕ್ಕೆ ಕೇವಲ 200 ರೂಪಾಯಿಗಳನ್ನು ಉಳಿಸಿದರೆ, ಪ್ರತಿ ತಿಂಗಳು 6,000 ರೂಪಾಯಿಗಳನ್ನು ಉಳಿಸಿದಂತಾಗುತ್ತದೆ. ವಾರ್ಷಿಕ ಹೂಡಿಕೆ 72,000 ರೂಪಾಯಿಯಾಗಿದ್ದರೆ, 15 ವರ್ಷಗಳವರೆಗೆ ಒಟ್ಟು ಹೂಡಿಕೆ 10,80,000 ರೂಪಾಯಿಯಾಗಲಿದೆ. ಪಿಪಿಎಫ್‌ನಲ್ಲಿ ಬಡ್ಡಿ ದರ ವಾರ್ಷಿಕ ಶೇಕಡಾ 7.1 ರಷ್ಟು ಲಭ್ಯವಿದೆ. 15 ವರ್ಷಗಳವರೆಗೆ ಅದೇ ದರದಲ್ಲಿ ಬಡ್ಡಿಯನ್ನು ಸ್ವೀಕರಿಸಿದರೆ, ಒಟ್ಟು ಆದಾಯವು ಸುಮಾರು 19,52,740 ಲಕ್ಷವಾಗಿರುತ್ತದೆ. ಒಟ್ಟು ಹೂಡಿಕೆಯ ಮೇಲೆ ಸುಮಾರು 8,72,740 ಲಕ್ಷ ರೂಪಾಯಿ ಬಡ್ಡಿ ಸಿಗುತ್ತದೆ.