ವಿಶ್ವದ ಅತ್ಯಂತ ಅಪಾಯಕಾರಿ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಸಹೋದರ ಇಬ್ರಾಹಿಂ ಬಿನ್ ಲಾಡೆನ್ ಬಂಗಲೆ ಮಾರಾಟವಾಗಲಿದೆ. ಅಮೆರಿಕದ ಲಾಸ್ ಏಂಜಲೀಸ್ ನಲ್ಲಿರುವ ಈ ಐಷಾರಾಮಿ ಬಂಗಲೆ ಕಳೆದ 20 ವರ್ಷಗಳಿಂದ ಖಾಲಿ ಇತ್ತು. ಈ ಬಂಗಲೆ ಮಾರಾಟದ ಸುದ್ದಿ ಈಗ ಚರ್ಚೆಗೆ ಬಂದಿದೆ. ಈ ಬಂಗಲೆ ಸುಮಾರು 2 ಬಿಲಿಯನ್ ಡಾಲರ್‌ಗಳಿಗೆ ಮಾರಾಟವಾಗುವ ಸಾಧ್ಯತೆಯಿದೆ.
ಲಾಸ್ ಏಂಜಲೀಸ್ ಅಮೆರಿಕದ ದುಬಾರಿ ನಗರ. ಅಲ್ಲಿರುವ ಬಂಗಲೆಯನ್ನು ಇಬ್ರಾಹಿಂ ಬಿನ್ ಲಾಡೆನ್ 1983 ರಲ್ಲಿ ಖರೀದಿಸಿದ್ದ. ಸುಮಾರು 20 ಲಕ್ಷ ಡಾಲರ್ ಅಂದರೆ 1.48 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದ್ದ. ಈ ಬಂಗಲೆ ಕಳೆದ 20 ವರ್ಷಗಳಿಂದ ಖಾಲಿ ಇದೆ. ಅದರಲ್ಲಿ ಯಾರೂ ವಾಸಿಸುತ್ತಿಲ್ಲ.
ಒಟ್ಟು ಎರಡು ಎಕರೆ ಜಾಗದಲ್ಲಿ ಈ ಬಂಗಲೆ ನಿರ್ಮಾಣವಾಗಿದೆ. ಲಾಸ್ ಏಂಜಲೀಸ್ ಪ್ರಸಿದ್ಧ ಹೋಟೆಲ್ ಬೆಲ್ ಏರ್ ಮತ್ತು ಬೆಲ್ ಏರ್ ಕಂಟ್ರಿ ಕ್ಲಬ್ ಬಳಿಯಿದೆ. ಹಾಗಾಗಿ ಅದ್ರ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. 2001 ರಲ್ಲಿ ಒಸಾಮಾ ಬಿನ್ ಲಾಡೆನ್ ಅಮೆರಿಕದಲ್ಲಿ ಭಯೋತ್ಪಾದಕ ದಾಳಿ ನಡೆಸಿದ ನಂತ್ರ ಇಬ್ರಾಹಿಂ ಬಂಗಲೆ ಬಿಟ್ಟಿದ್ದ.
ಈ ಬಂಗಲೆಯನ್ನು 1931 ರಲ್ಲಿ ನಿರ್ಮಿಸಲಾಗಿತ್ತು. ಏಳು ಬೆಡ್ ರೂಮ್ ಮತ್ತು ಐದು ಶೌಚಾಲಯವನ್ನು ಹೊಂದಿದೆ. ಕಟ್ಟಡದ ಹೊರ ಭಾಗದಲ್ಲಿ ಸಾಕಷ್ಟು ಜಾಗವಿದೆ. ಇಬ್ರಾಹಿಂ ಬಿನ್ ಲಾಡೆನ್ ತನ್ನ ಮಾಜಿ ಪತ್ನಿ ಕ್ರಿಸ್ಟಿನ್ ಜೊತೆ ಇಲ್ಲಿ ವಾಸಿಸುತ್ತಿದ್ದ.