ಭೋಪಾಲ್: ಮೊದಲ ರಾತ್ರಿಯೇ ವಧು ಪರಾರಿಯಾದ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಹೊಸದಾಗಿ ಮದುವೆಯಾದ ಮೊದಲ ರಾತ್ರಿ ವಧು ಛಾವಣಿಯಿಂದ ಜಿಗಿದು ಓಡಿಹೋಗಿದ್ದು, ವಂಚನೆಗೆ ಬಲಿಯಾದ ವರ ದೂರು ನೀಡಲು ಪೊಲೀಸ್ ಠಾಣೆಗೆ ತಲುಪಿದ ನಂತರ ಘಟನೆ ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದ ಭಿಂಡ್ನ ಘೋರ್ಮಿ ಪ್ರದೇಶದ ನವವಿವಾಹಿತ ಮದುವೆಯಾಗಲು ವಧುವಿಗೆ 90,000 ರೂ.ಕೊಟ್ಟಿದ್ದ. ಒಟ್ಟು 5 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಅದರಲ್ಲಿ 3 ಜನರನ್ನು ಬಂಧಿಸಲಾಗಿದೆ.
ವರ ಸೋನು ಜೈನ್ಗೆ ಸೂಕ್ತ ವಧುವನ್ನು ಹುಡುಕಲು ಸಾಧ್ಯವಾಗಲಿಲ್ಲ. ಗ್ವಾಲಿಯರ್ ನಿವಾಸಿ ಉದಲ್ ಖಾತಿಕ್ ಗೆ ಈ ಬಗ್ಗೆ ತಿಳಿಸಿದ್ದ. ನಾನು ನಿನಗೆ ಮದುವೆ ಮಾಡಿಸುತ್ತೇನೆ. ಆದರೆ, ವಧುವಿಗೆ 1 ಲಕ್ಷ ರೂ. ಕೊಡಬೇಕೆಂದು ಹೇಳಿ 90,000 ರೂ.ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಉದಲ್ ಖಾತಿಕ್, ಅನಿತಾ ರತ್ನಾಕರ್, ಜಿತೇಂದ್ರ ರತ್ನಾಕರ್ ಮತ್ತು ಅರುಣ್ ಖಾತಿಕ್ ಎಂಬುವರು ಸೇರಿಕೊಂಡು ಸೋನು ಜೈನ್ ಗೆ ಮೋಸ ಮಾಡಲು ಮುಂದಾಗಿದ್ದಾರೆ. ಇವರೆಲ್ಲ ಸೇರಿ ಘೋರ್ಮಿಗೆ ತೆರಳಿದ್ದಾರೆ. ಸೋನು ಜೈನ್ ಕುಟುಂಬದ ಎಲ್ಲ ಸದಸ್ಯರ ಸಮ್ಮುಖದಲ್ಲಿ ಅನಿತಾಳನ್ನು ವಿವಾಹವಾಗಿದ್ದಾರೆ.
ಮದುವೆಯ ನಂತರ ವರನ ಸ್ಥಳವನ್ನು ತಲುಪಿದ್ದು, ಸೋನು ಕುಟುಂಬವು ನವವಿವಾಹಿತರನ್ನು ಆಶೀರ್ವದಿಸಿದೆ. ಆಗಲೇ ತಡರಾತ್ರಿಯಾಗಿದ್ದರಿಂದ ಎಲ್ಲರೂ ತಮ್ಮ ತಮ್ಮ ಕೋಣೆಯಲ್ಲಿ ಮಲಗಲು ಹೋದರು. ಅನಿತಾ ಜೊತೆ ಬಂದಿದ್ದ ಜಿತೇಂದ್ರ ರತ್ನಾಕರ್ ಮತ್ತು ಅರುಣ್ ಖಾತಿಕ್ ಇಬ್ಬರೂ ಕೊಠಡಿಯ ಹೊರಗೆ ಮಲಗಲು ಹೋದರು, ಅನಿತಾ ಅಸ್ವಸ್ಥಳಂತೆ ನಟಿಸಿ ಟೆರೇಸ್ಗೆ ಹೋದರು. ನಂತರ, ವಧು ಹೋಗಿದ್ದನ್ನು ಕುಟುಂಬದ ಯಾರೋ ಗಮನಿಸಿದಾಗ, ಅವರು ವಧುಗಾಗಿ ಹುಡುಕಾಟ ಆರಂಭಿಸಿದರು, ಆದರೆ, ಆಕೆಯನ್ನು ಹುಡುಕಲಾಗಲಿಲ್ಲ. ನಂತರ ಕುಟುಂಬ ಸದಸ್ಯರು ಪೊಲೀಸರನ್ನು ಸಂಪರ್ಕಿಸಿದರು, ಅವರು ಅನಿತಾಳನ್ನು ಪತ್ತೆ ಹಚ್ಚಿದ್ದಾರೆ.
ಅನಿತಾ ಟೆರೇಸ್ನಿಂದ ಜಿಗಿದು ಪರಾರಿಯಾಗಿದ್ದು, ರಾತ್ರಿ ಗಸ್ತು ಸಮಯದಲ್ಲಿ ಪೊಲೀಸರಿಗೆ ಸಿಕ್ಕಿದ್ದಾಳೆ. ವಧು ಪತ್ತೆಯಾದ ನಂತರ, ಸೋನು ಘೋರ್ಮಿ ಪೊಲೀಸ್ ಠಾಣೆಗೆ ಬಂದು ತಾನು ಮೋಸ ಹೋಗಿದ್ದೇನೆ ಎಂದು ದೂರು ದಾಖಲಿಸಿದ್ದಾನೆ. ಎಲ್ಲಾ ಆರೋಪಿಗಳ ವಿರುದ್ಧ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದಾರೆ.