ಬೆಂಗಳೂರು: ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಂಗಳೂರು-ಕಾಸರಗೋಡು ನಡುವೆ ನಾಳೆಯಿಂದ ಒಂದು ವಾರ ಕಾಲ ಬಸ್ ಸಂಚಾರವನ್ನು ಸ್ಥಗಿತ ಮಾಡಲಾಗುವುದು.
ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ನಾಳೆಯಿಂದ ಒಂದು ವಾರ ಕಾಲ ಮಂಗಳೂರು-ಕಾಸರಗೋಡು ನಡುವೆ ಬಸ್ ಸಂಚಾರ ಇರುವುದಿಲ್ಲ. ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರ ಬಂದ್ ಮಾಡಲಿದ್ದು, ಕೇರಳದಿಂದ ಬರುವವರಿಗೆ ನೆಗೆಟಿವ್ ವರದಿ ಕಡ್ಡಾಯವಾಗಿರುತ್ತದೆ.
ಮದುವೆ ಕಾರ್ಯಕ್ರಮಗಳಿಗೆ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ನಿಯಮ ಉಲ್ಲಂಘಿಸಿದ್ದರೆ ಪ್ರಕರಣ ದಾಖಲಿಸಲಾಗುವುದು. ವಿದ್ಯಾರ್ಥಿಗಳಿಗೂ ನೆಗೆಟಿವ್ ವರದಿ ಕಡ್ಡಾಯವಿದೆ. ವಿದ್ಯಾರ್ಥಿ ನಿಲಯಗಳಲ್ಲಿ ಒಂದು ಕ್ವಾರಂಟೈನ್ ಆಗಬೇಕಿದೆ ಎಂದು ಹೇಳಲಾಗಿದೆ.
ಇನ್ನು ಕೋವಿಡ್ ಹೆಚ್ಚಾಗಿರುವ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಬೆಂಗಳೂರು ನಗರ ಸೇರಿದಂತೆ 8 ಜಿಲ್ಲೆಯ ಜಿಲ್ಲಾಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ.
ಬಿಬಿಎಂಪಿ ಸೇರಿ ಬೆಂಗಳೂರು ನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ ಹಾಗೂ ಶಿವಮೊಗ್ಗ ಸೇರಿದಂತೆ 8 ಜಿಲ್ಲಾಧಿಕಾರಿಗಳ ಅಧಿಕಾರಿಗಳೊಂದಿಗೆ ಬಸವರಾಜ್ ಬೊಮ್ಮಾಯಿ ಸಭೆ ನಡೆಸಿದ್ದಾರೆ.
ಇನ್ನು 15 ದಿನಗಳ ಕಾಲ ನೈಟ್ ಕರ್ಫ್ಯೂ ಮುಂದುವರೆಸಲಾಗುವುದು. ಚಿತ್ರಮಂದಿರಗಳಲ್ಲಿ ಶೇಕಡ 50 ರಷ್ಟು ಜನರಿಗೆ ಮಾತ್ರ ಅವಕಾಶವಿರುತ್ತದೆ. ಇನ್ನು 15 ದಿನಗಳ ಕಾಲ ಶೇಕಡ 50 ರಷ್ಟು ಜನರಿಗೆ ಮಾತ್ರ ಅವಕಾಶವಿದ್ದು ಪಬ್ ಗಳಿಗೂ ಈಗಿರುವ ನಿಯಮವೇ ಅನ್ವಯವಾಗಲಿದೆ. ಗಡಿಗಳಲ್ಲಿ ಚೆಕ್ ಪೋಸ್ಟ್ ಸ್ಥಾಪನೆಗೆ ಸಿಎಂ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.