ಕೊಪ್ಪಳ: ಅಕ್ರಮ ಸಂಬಂಧದ ವಿಚಾರವಾಗಿ ದಂಪತಿ ನಡುವೆ ಜಗಳವಾಗಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿದ ಘಟನೆ ನಡೆದಿದೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ಹೊರವಲಯದ ಜಮೀನಿನಲ್ಲಿ 25 ವರ್ಷದ ಮಂಜುಳಾ ಅವರ ಮೃತದೇಹ ಕಂಡು ಬಂದಿದೆ. ಪತಿ ಮಂಜುನಾಥ ಕೊಲೆ ಮಾಡಿದ ಆರೋಪ ಕೇಳಿಬಂದಿದೆ. ಮಂಜುಳಾ, ಮಂಜುನಾಥ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಂಜುಳಾ ತಾಲೂಕು ಆಸ್ಪತ್ರೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಗುತ್ತಿಗೆ ನೌಕರರಾಗಿದ್ದು, ಮಂಜುನಾಥ ಕೆನರಾ ಬ್ಯಾಂಕ್ ನಲ್ಲಿ ಅಟೆಂಡರ್ ಆಗಿದ್ದಾನೆ.
ಕುಷ್ಟಗಿಯ ಹೋಟೆಲ್ ಗೆ ತೆರಳಿದ್ದ ದಂಪತಿ ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಂಡು ಫೋಟೋವನ್ನು ತಮ್ಮ ಮೊಬೈಲ್ ಸ್ಟೇಟಸ್ ನಲ್ಲಿ ಹಂಚಿಕೊಂಡಿದ್ದಾರೆ. ನಂತರದಲ್ಲಿ ಇಬ್ಬರ ನಡುವೆ ಜಗಳವಾಗಿದೆ. ಮಂಜುನಾಥ ಬೇರೆ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಈ ವಿಚಾರವಾಗಿ ಪತ್ನಿ ಜಗಳವಾಡಿದ್ದಳು. ಜಗಳ ವಿಕೋಪಕ್ಕೆ ತಿರುಗಿದ್ದು, ಮೊಬೈಲ್ ಚಾರ್ಜರ್ ನಿಂದ ಕುತ್ತಿಗೆ ಬಿಗಿದು ಪತ್ನಿಯನ್ನು ಕೊಲೆ ಮಾಡಿದ ಮಂಜುನಾಥ ಕಲ್ಲಿನಿಂದ ಮುಖ ಜಜ್ಜಿ ಹೊಲದಲ್ಲಿ ಮೃತದೇಹ ಎಸೆದಿದ್ದಾನೆ ಎಂದು ಹೇಳಲಾಗಿದೆ.