ನವದೆಹಲಿ: 45 ದಿನಗಳ ಒಳಗೆ ಸಾರ್ವಜನಿಕರಿಂದ ಬರುವ ದೂರುಗಳನ್ನು ಪರಿಹರಿಸಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಸಂಸದೀಯ ಸಮಿತಿಯೊಂದು ಈ ಕುರಿತಂತೆ ಶಿಫಾರಸು ಮಾಡಿದ್ದು, ಸಾರ್ವಜನಿಕರಿಂದ ಬರುವ ದೂರುಗಳನ್ನು 60 ದಿನ ಬದಲಾಗಿ 45 ದಿನಗಳ ಒಳಗೆ ಪರಿಹರಿಸಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಕೇಂದ್ರೀಯ ಸಾರ್ವಜನಿಕ ಕುಂದುಕೊರತೆ ನಿವಾರಣೆ ಮತ್ತು ಮೇಲುಸ್ತುವಾರಿ ವ್ಯವಸ್ಥೆ ಅನ್ವಯ ಯಾವುದೇ ಸಚಿವಾಲಯ, ವಿಭಾಗದ ಕುರಿತು ಸಾರ್ವಜನಿಕರು ದೂರು ನೀಡಬಹುದಾಗಿದೆ. ದೂರು ಸ್ವೀಕರಿಸಿದ 45 ದಿನಗಳ ಒಳಗೆ ಅವುಗಳನ್ನು ಪರಿಹರಿಸಬೇಕು. ಕೊರೋನಾ ಸಂಬಂಧಿತ ದೂರುಗಳು ಇದ್ದಲ್ಲಿ ಅವುಗಳನ್ನು ಆದ್ಯತೆಯ ಮೇಲೆ ಮೂರು ದಿನಗಳ ಒಳಗೆ ಪರಿಹರಿಸಬೇಕೆಂದು ಸೂಚಿಸಲಾಗಿದೆ.