ಕೊರೊನಾ ವೈರಸ್ ರೂಪಾಂತರಿಗಳು ಪ್ರಸ್ತುತ ವಿಶ್ವಕ್ಕೆ ದೊಡ್ಡ ಸಮಸ್ಯೆಯನ್ನೇ ತಂದೊಡ್ಡಿವೆ. ಒಂದು ರೂಪಾಂತರಿಗಳು ಮುಗೀತು ಅನ್ನೋಷ್ಟರಲ್ಲಿ ಇನ್ನೊಂದು ರೂಪಾಂತರಿ ಹುಟ್ಟುಕೊಂಡಿದೆ ಎಂಬ ಸುದ್ದಿಯನ್ನು ಕೇಳುತ್ತಲೇ ಇದ್ದೇವೆ. ಆಲ್ಫಾ, ಬೀಟಾ, ಡೆಲ್ಟಾ ಹೀಗೆ ಕೊರೊನಾ ರೂಪಾಂತರಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಪ್ರಿಪ್ರಿಂಟ್ ಸರ್ವರ್ MedRxiv ನಲ್ಲಿ ಪ್ರಕಟವಾದ ಅಧ್ಯಯನವೊಂದರಲ್ಲಿ ಈ ರೂಪಾಂತರಿಗಳು ಹೇಗೆ ಜನ್ಮ ತಾಳುತ್ತವೆ ಅನ್ನೋದರ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಲಾಗಿದೆ.
ಈ ವರದಿಯಲ್ಲಿ ವಿಜ್ಞಾನಿಗಳು ತಿಳಿಸಿರುವ ಮಾಹಿತಿಯ ಪ್ರಕಾರ ಕೊರೊನಾ ಸೋಂಕು ಒಬ್ಬ ವ್ಯಕ್ತಿಯ ದೇಹವನ್ನು ಪ್ರವೇಶಿಸಿದ ಬಳಿಕ ಅನೇಕ ರೀತಿಯಲ್ಲಿ ಬದಲಾವಣೆಗೊಳ್ಳುತ್ತದೆ. ಈ ಮಾರ್ಪಾಡಾದ ವೈರಸ್ ಇನ್ನಷ್ಟು ಜನರ ದೇಹವನ್ನು ಪ್ರವೇಶಿಸುತ್ತದೆ. ಇದರ ಪರಿಣಾಮವಾಗಿ ಹೊಸ ರೂಪಾಂತರಿಯ ಉದಯವಾಗುತ್ತದೆ. ವ್ಯಕ್ತಿಗಳಲ್ಲಿ ಸುಮಾರು 80 ಪ್ರತಿಶತ ಜಿನೋಮ್ ಸಿಂಕ್ರೆಸಿಂಗ್ ಆದ ಬಳಿಕ ಹೊಸ ರೂಪಾಂತರಿಯ ಹೆಸರನ್ನು ಆ ವೈರಸ್ಗೆ ನೀಡಲಾಗುತ್ತದೆ.
ಈ ಅಧ್ಯಯನದಲ್ಲಿ ಹೈದರಾಬಾದ್ನ ಸೆಂಟರ್ ಫಾರ್ ಸೆಲ್ಯೂಲರ್ & ಮಾಲಿಕ್ಯೂಲಾರ್ ಬಯೋಲಜಿ, ಇನ್ಸ್ಟಿಟ್ಯೂಟ್ ಆಫ್ ಜಿನೋಮಿಕ್ಸ್ & ಇಂಟಿಗ್ರೇಟಿವ್ ಬಯೋಲಜಿ, ದೆಹಲಿ, ಇನ್ಸ್ಟಿಟ್ಯೂಟ್ ಆಫ್ ಲೈಫ್ ಸೆನ್ಸ್, ಭುವನೇಶ್ವರ, ಅಕಾಡೆಮಿ ಫಾರ್ ಸೈಂಟಿಫಿಕ್ & ಇನೋವೇಟಿವ್ ರಿಸರ್ಚ್, ಗಾಜಿಯಾಬಾದ್ , ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್, ದೆಹಲಿ ಹಾಗೂ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಸಂಶೋಧಕರು ಭಾಗಿಯಾಗಿದ್ದರು.
ಸಂಶೋಧಕರು ಬೇರೆ ಬೇರೆ ಸಮಯದಲ್ಲಿ ಸೋಂಕಿಗೆ ತುತ್ತಾಗಿದ್ದ ವ್ಯಕ್ತಿಗಳನ್ನ ಅಧ್ಯಯನಕ್ಕೆ ಬಳಸಿಕೊಂಡಿದ್ದರು. ಮೊದಲ ಹಂತದಲ್ಲಿ ಸಂಶೋಧಕರ ತಂಡವು ಚೀನಾ, ಜರ್ಮನಿ, ಮಲೇಷಿಯಾ. ಬ್ರಿಟನ್ ಹಾಗೂ ಭಾರತದ ವಿವಿಧ ಜನಸಂಖ್ಯೆಯಿಂದ ಸಂಗ್ರಹ ಮಾಡಲಾದ 1347 ಮಾದರಿಗಳನ್ನು ಸಂಶೋಧನೆಗೆ ಬಳಸಿಕೊಂಡಿತ್ತು. ಈ ಮಾದರಿಯ ಮೂಲಕ ಜಿನೋಮ್ ವೈಡ್ ಇಂಟ್ರಾ ಹೋಸ್ಟ್ ಸಿಂಗಲ್ ಲೋಕಸ್ ಬಗ್ಗೆ ಅಧ್ಯಯನ ನಡೆಸಲಾಗಿತ್ತು. ಹಾಗೂ ಒಂದು ಅಲೆಯಿಂದ ಮತ್ತೊಂದು ಅಲೆಯಲ್ಲಿ ಹೇಗೆ ಸೋಂಕು ರೂಪಾಂತರಗೊಂಡಿದೆ ಅನ್ನೋದನ್ನ ಪತ್ತೆ ಮಾಡಲಾಗಿತ್ತು.