ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, ಸಿಬಿಎಸ್ಇ ಬೋರ್ಡ್ 12 ನೇ ತರಗತಿ ಫಲಿತಾಂಶಗಳನ್ನು ಇಂದು ಪ್ರಕಟಿಸಲಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ. ಸಿಬಿಎಸ್ಇ 12 ನೇ ತರಗತಿ ಫಲಿತಾಂಶಗಳನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್ cbseresults.nic.in ನಲ್ಲಿ ಬಿಡುಗಡೆ ಮಾಡಲಿದೆ.
ಸಿಬಿಎಸ್ಇ 12ನೇ ತರಗತಿ ಫಲಿತಾಂಶಗಳನ್ನು 30 ಜುಲೈ 2021 ರಂದು ಮಧ್ಯಾಹ್ನ 2 ಗಂಟೆಗೆ ಘೋಷಿಸಲಾಗುತ್ತದೆ ಎಂದು ಮಂಡಳಿ ಹೇಳಿದೆ. ಸಿಬಿಎಸ್‌ಇ 12 ನೇ ತರಗತಿ ಬೋರ್ಡ್ ಪರೀಕ್ಷೆಗೆ 16 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಕೊರೊನಾ ಪ್ರಕರಣಗಳಿಂದಾಗಿ ಸಿಬಿಎಸ್‌ಇ 12 ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಯಾವುದೇ ಪರೀಕ್ಷೆ ಮಾಡದೆ ಫಲಿತಾಂಶ ನೀಡಲಾಗ್ತಿದೆ.
10 ಮತ್ತು 12 ನೇ ತರಗತಿಯ ರದ್ದಾದ ಪರೀಕ್ಷೆಗಳ ಫಲಿತಾಂಶಗಳನ್ನು ಬಿಡುಗಡೆ ಮಾಡುವ ಮೊದಲು, ಸಿಬಿಎಸ್‌ಇ ಎರಡೂ ತರಗತಿಗಳ ವಿದ್ಯಾರ್ಥಿಗಳಿಗೆ ರೋಲ್ ಸಂಖ್ಯೆಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ತಮ್ಮ ರೋಲ್ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಕಳೆದ ವರ್ಷ ಸಿಬಿಎಸ್‌ಇ ಜುಲೈ 13, 2020 ರಂದು 12 ನೇ ತರಗತಿ ಫಲಿತಾಂಶವನ್ನು ಮತ್ತು ಎರಡು ದಿನಗಳ ನಂತರ ಜುಲೈ15, 2020 ರಂದು 10ನೇ ತರಗತಿ ಫಲಿತಾಂಶವನ್ನು ಬಿಡುಗಡೆ ಮಾಡಿತ್ತು.
ಹಿಂದಿನ ವರ್ಷಗಳ ಫಲಿತಾಂಶದ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗಿದೆ. 10ನೇ ತರಗತಿ, 11ನೇ ತರಗತಿಯಲ್ಲಿ ವಿದ್ಯಾರ್ಥಿಗಳ ಫಲಿತಾಂಶ ಮತ್ತು 12 ನೇ ತರಗತಿಯ ಆಂತರಿಕ ಪರೀಕ್ಷೆಗಳನ್ನು ಆಧರಿಸಿ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗುತ್ತದೆ.