ವಿಶ್ವದಲ್ಲಿ ಸದ್ಯ ಟೋಕಿಯೋ ಒಲಿಂಪಿಕ್ಸ್ನದ್ದೇ ಸದ್ದು ಎಂಬಂತಾಗಿದೆ. ಜಪಾನ್ ರಾಜಧಾನಿಯಲ್ಲಿ ನಡೆಯುತ್ತಿರುವ ಈ ಐತಿಹಾಸಿ ಕ್ರೀಡಾಕೂಟದಲ್ಲಿ ಪದಕ ಗೆಲ್ಲಲು ಕ್ರೀಡಾಪಟುಗಳು ಇನ್ನಿಲ್ಲದ ಸಾಹಸವನ್ನು ಪ್ರದರ್ಶಿಸುತ್ತಿದ್ದಾರೆ.
ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಟೋಕಿಯೋ ಒಲಿಂಪಿಕ್ ಸಂಬಂಧಿ ವಿಡಿಯೋವೊಂದರಲ್ಲಿ ಮಹಿಳಾ ಕ್ರೀಡಾಪಟು ಮಾಡಿದ ವಿಚಿತ್ರ ಕೆಲಸವೊಂದು ಭಾರೀ ಸುದ್ದಿ ಮಾಡ್ತಿದೆ. ಆಸ್ಟ್ರೇಲಿಯಾದ ಕ್ರೀಡಾಪಟು ಜೆಸ್ಸಿಕಾ ಫಾಕ್ಸ್ ಕಯಾಕ್ (ತೊಗಲ ದೋಣಿ) ವಿಭಾಗದಲ್ಲಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. 27 ವರ್ಷದ ಜೆಸ್ಸಿಕಾ ತಾವು ಕಾಂಡೋಮ್ ಬಳಕೆ ಮಾಡಿ ಈ ಸ್ಪರ್ಧೆ ಗೆದ್ದಿರೋದಾಗಿ ಹೇಳಿಕೊಂಡಿದ್ದಾರೆ.
ಜೆಸ್ಸಿಕಾ ಫಾಕ್ಸ್ ತಾವು ಯಾವ ರೀತಿಯಲ್ಲಿ ಕಾಂಡೋಮ್ ಬಳಕೆ ಮಾಡಿದ್ದೆ ಅನ್ನೋದನ್ನ ವಿವರಿಸಿದ್ದಾರೆ. ಜೆಸ್ಸಿಕಾ ಸ್ಪರ್ಧೆಗೆ ಇಳಿಯುವ ಮುನ್ನ ತಮ್ಮ ದೋಣಿಯಲ್ಲಿ ಬಿರುಕು ಉಂಟಾಗಿದ್ದನ್ನ ಗಮನಿಸಿದ್ದರು. ಇದನ್ನು ಅವರು ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಆಟಗಾರರಿಗೆ ನೀಡಲಾಗುವ ಕಾಂಡೋಮ್ನ್ನು ಬಳಸಿ ಸರಿ ಮಾಡಿಕೊಂಡಿದ್ದಾಗಿ ಟಿಕ್ ಟಾಕ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಸ್ಪರ್ಧೆಯಲ್ಲಿ ಚಿನ್ನ ಕಳೆದುಕೊಂಡಿದ್ದಕ್ಕೆ ಜೆಸ್ಸಿಕಾ ಬೇಸರ ವ್ಯಕ್ತಪಡಿಸಿದ್ದರೂ ಸಹ ಕಾಂಡೋಮ್ನ ನೆರವಿನಿಂದಲೇ ತಾವು ಕಂಚಿನ ಪದಕವನ್ನಾದರೂ ಗೆಲ್ಲುವಂತಾಯ್ತು ಎಂದು ತೃಪ್ತಿ ಪಟ್ಟಿದ್ದಾರೆ. 2016ರ ರಿಯೋ ಡಿ ಜನೈರೋ ಒಲಿಂಪಿಕ್ಸ್ನಲ್ಲಿ ಜೆಸ್ಸಿಕಾ ಬೆಳ್ಳಿ ಪದಕ ಸಂಪಾದಿಸಿದ್ದರು.