ಬೆಂಗಳೂರು: ರಾಜ್ಯದಲ್ಲಿ ಬಹುದಿನಗಳ ನಂತರ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಜೂನ್ 30 ರಿಂದ ಆರಂಭವಾಗಿದೆ. ನಿಗದಿ ಮಾಡಲಾದ ವೇಳಾಪಟ್ಟಿಯ ಪ್ರಕಾರ, ವರ್ಗಾವಣೆ ಪ್ರಕ್ರಿಯೆ ಅವಧಿಯನ್ನು ಕನಿಷ್ಠ ಒಂದೂವರೆ ತಿಂಗಳು ಕಡಿಮೆ ಮಾಡಬೇಕು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯಿಸಿದೆ.
ಹೆಚ್ಚುವರಿ ವರ್ಗಾವಣೆಗೆ ಒಳಗಾದವರಿಗೆ ಕೌನ್ಸಲಿಂಗ್ ವೇಳೆ ವಿಶೇಷ ಆದ್ಯತೆ ನೀಡಲು ಕಾಯ್ದೆಯಲ್ಲಿ ತಿದ್ದುಪಡಿ ಮಾಡಲಾಗಿದೆ. ಅಂತಹ ಶಿಕ್ಷಕರು ಅರ್ಜಿ ಸಲ್ಲಿಸಲು ಜುಲೈ 7 ಕೊನೆಯ ದಿನವಾಗಿತ್ತು. ಈ ಹಿಂದೆ ವರ್ಗಾವಣೆಗೆ ಅಧಿಸೂಚನೆ ಅನ್ವಯ ಅರ್ಜಿ ಸಲ್ಲಿಸಿದವರಿಗೆ ವರ್ಗಾವಣೆ ತಂತ್ರಾಂಶದಲ್ಲಿ ಮಾಡಲು ಅವಕಾಶ ನೀಡಲಾಗಿದೆ. ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ಕೂಡ ಅವಕಾಶ ನೀಡಲಾಗಿದೆ.
ಈಗಿರುವ ವೇಳಾಪಟ್ಟಿಯ ಅನ್ವಯ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ 7 ತಿಂಗಳು ನಡೆಯಲಿದ್ದು, ಇಷ್ಟೊಂದು ದೀರ್ಘಾವಧಿಯ ಸಂದರ್ಭದಲ್ಲಿ ಕೆಲವರು ನಿವೃತ್ತರಾಗುತ್ತಾರೆ. ಮತ್ತೆ ಕೆಲವರು ಪದೋನ್ನತಿಗೆ ಅರ್ಹತೆ ಪಡೆಯುತ್ತಾರೆ. ಈ ಕಾರಣದಿಂದ ವರ್ಗಾವಣೆ ಪ್ರಕ್ರಿಯೆ ಅವಧಿಯನ್ನು ಕನಿಷ್ಠ ಒಂದೂವರೆ ತಿಂಗಳು ಕಡಿಮೆ ಮಾಡಬೇಕೆಂದು ಮನವಿ ಮಾಡಿರುವುದಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಹೇಳಿದ್ದಾರೆ.