ಜಪಾನ್ ರಾಜಧಾನಿ ಟೋಕಿಯೋದಲ್ಲಿ ಒಲಿಂಪಿಕ್ ಆಟ ನಡೆಯುತ್ತಿರೋದರ ಬೆನ್ನಲ್ಲೇ ಕೋವಿಡ್ ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರೋದು ಆತಂಕಕ್ಕೆ ಕಾರಣವಾಗಿದೆ.
ಕ್ಯಾಬಿನೇಟ್ ಮುಖ್ಯ ಕಾರ್ಯದರ್ಶಿ ಕಟ್ಸುನೊಬು ಕ್ಯಾಟೋ ಈ ವಿಚಾರವಾಗಿ ಮಾತನಾಡಿದ್ದು, ಈ ಪ್ರಮಾಣದಲ್ಲಿ ಸೋಂಕು ಏರಿಕೆಯಾಗುತ್ತಿರೋದನ್ನ ನಾವು ಹಿಂದೆಂದೂ ಕಂಡೇ ಇರಲಿಲ್ಲ ಎಂದು ಆತಂಕ ಹೊರಹಾಕಿದ್ದಾರೆ. ಹೊಸ ಪ್ರಕರಣಗಳು ಟೋಕಿಯೋದಲ್ಲಿ ಮಾತ್ರವಲ್ಲದೇ ಜಪಾನ್ನಾದ್ಯಂತ ಹೆಚ್ಚುತ್ತಿದೆ.
ಗುರುವಾರ ಟೋಕಿಯೋದಲ್ಲಿ 3865 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. ಕಳೆದ ವಾರಕ್ಕೆ ಹೋಲಿಸಿದ್ರೆ ಸೋಂಕಿನ ಸಂಖ್ಯೆಯಲ್ಲಿ ದುಪ್ಪಟ್ಟು ಏರಿಕೆಯಾಗಿದೆ. ಕಳೆದ ವರ್ಷ ಕೊರೊನಾ ಎಂಟ್ರಿ ಕೊಟ್ಟಾಗಲೂ ದಾಖಲೆಯಾಗದ್ದಷ್ಟು ಪ್ರಕರಣಗಳು ಈಗ ಜಪಾನ್ನಲ್ಲಿ ವರದಿಯಾಗುತ್ತಿದೆ. ಜಪಾನ್ನಾದ್ಯಂತ ಒಂದು ದಿನದಲ್ಲಿ 9500 ಹೊಸ ಪ್ರಕರಣಗಳು ವರದಿಯಾಗಿದ್ದು ಇದು ಕೂಡ ಹೊಸ ದಾಖಲೆಯಾಗಿದೆ.
ಜಪಾನ್ ಸರ್ಕಾರದ ಮೆಡಿಕಲ್ ಸಲಹೆಗಾರ ಡಾ. ಶಿಗೆರು ಒಮಿ ಒಲಿಂಪಿಕ್ ಹಾಗೂ ಬೇಸಿಗೆ ರಜೆಯು ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಲು ಕಾರಣ ಎಂದು ಹೇಳಿದ್ದಾರೆ.