ದೇಶದಲ್ಲಿ ಕೊರೊನಾ ಸೋಂಕನ್ನು ನಿಯಂತ್ರಣ ಮಾಡುವ ಸಲುವಾಗಿ ಕೇಂದ್ರ ಗೃಹ ಸಚಿವಾಲಯವು ಕೋವಿಡ್ 19 ಮಾರ್ಗಸೂಚಿ ಸಿಂಧುತ್ವವನ್ನು ಆಗಸ್ಟ್ 31ರವರೆಗೂ ವಿಸ್ತರಿಸಿದೆ. ಹೆಚ್ಚು ಕೊರೊನಾ ಪ್ರಕರಣವನ್ನು ಹೊಂದಿರುವ ಜಿಲ್ಲೆಗಳಲ್ಲಿ ಆದಷ್ಟು ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಸೂಚನೆ ನೀಡಿದೆ.
ದೇಶದ ಪ್ರತಿಯೊಂದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರವನ್ನು ಬರೆದಿರುವ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಭಲ್ಲಾ, ಕೋವಿಡ್ 19 ಪ್ರಕರಣ ಕ್ಷೀಣಿಸಿದರೂ ಸಹ ಮಾರ್ಗಸೂಚಿಗಳ ಪಾಲನೆಯಾಗಬೇಕು ಎಂದು ಉಲ್ಲೇಖಿಸಿದ್ದಾರೆ.
ಮುಂಬರುವ ಸಾಲು ಸಾಲು ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುವಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಲಾಗಿದೆ.
ಕೋವಿಡ್ ಸೋಂಕಿನಲ್ಲಿ ಇಳಿಕೆ ಕಾಣುತ್ತಿದ್ದಂತೆಯೇ ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯಾಪಾರ – ವ್ಯವಹಾರ ಚಟುವಟಿಕೆಗಳು ಚುರುಕುಗೊಳ್ತಿದೆ. ಕೊರೊನಾ ಪ್ರಕರಣದಲ್ಲಿ ಇಳಿಮುಖವಾಗಿರೋದು ತೃಪ್ತಿದಾಯಕ ವಿಚಾರವಾಗಿದ್ದರೂ ಸಹ ಸಂಪೂರ್ಣ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಿದೆ ಅನ್ನೋದನ್ನ ನಾವು ತಳ್ಳಿ ಹಾಕುವಂತಿಲ್ಲ. ಆದ್ದರಿಂದ ತೃಪ್ತಿಯಿಂದಿರುವ ಸಮಯ ಇದಲ್ಲ ಹೀಗಾಗಿ ಕೊರೊನಾ ನಿರ್ಬಂಧಗಳಲ್ಲಿ ಸಡಿಲಿಕೆ ನೀಡುವ ಮುನ್ನ ಎಚ್ಚರಿಕೆ ಅಗತ್ಯ ಎಂದು ಕೇಂದ್ರ ಗೃಹ ಸಚಿವಾಲಯ ನೀಡಿರುವ ಪತ್ರದಲ್ಲಿ ಬರೆಯಲಾಗಿದೆ.