ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ, ಫಿಟ್‌ನೆಸ್ ಪ್ರಮಾಣಪತ್ರ ಸೇರಿದಂತೆ ಇತರ ಮೋಟಾರು ವಾಹನ ದಾಖಲೆಗಳ ಮಾನ್ಯತೆ ಅವಧಿ ಮೀರುತ್ತಿದ್ದರೆ ಚಿಂತಿಸುವ ಅಗತ್ಯವಿಲ್ಲ. ಅದ್ರ ನವೀಕರಣಕ್ಕೆ ಮತ್ತೊಂದಿಷ್ಟು ದಿನ ಸಿಕ್ಕಿದೆ. ಸರ್ಕಾರ ಮತ್ತೊಮ್ಮೆ ಸಿಂಧುತ್ವವನ್ನು ವಿಸ್ತರಿಸಿದೆ. ಕೊರೊನಾ ಕಾರಣಕ್ಕೆ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ರಸ್ತೆ ಮತ್ತು ಸಾರಿಗೆ ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ, ಫೆಬ್ರವರಿ 1, 2020 ರಂದು ಅವಧಿ ಮುಗಿದ ಮತ್ತು ಲಾಕ್‌ಡೌನ್ ನಿರ್ಬಂಧದಿಂದಾಗಿ ನವೀಕರಿಸಲಾಗದ ಈ ದಾಖಲೆಗಳನ್ನು ಈಗ ಸೆಪ್ಟೆಂಬರ್ 30, 2021 ರವರೆಗೆ ಮಾನ್ಯವೆಂದು ಪರಿಗಣಿಸಲಾಗುತ್ತದೆ.
ಸಚಿವಾಲಯವು ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ಆದೇಶ ಹೊರಡಿಸಿದೆ. ಕೊರೊನಾ ಹಿನ್ನಲೆಯಲ್ಲಿ ಚಾಲನಾ ಪರವಾನಗಿ, ಆರ್‌ಸಿ ಮತ್ತು ಫಿಟ್‌ನೆಸ್ ಪ್ರಮಾಣಪತ್ರದಂತಹ ದಾಖಲೆಗಳ ಸಿಂಧುತ್ವವನ್ನು ಸರ್ಕಾರ ಹಲವು ಬಾರಿ ವಿಸ್ತರಿಸಿದೆ. ಈ ಮೊದಲು, ಈ ಎಲ್ಲಾ ದಾಖಲೆಗಳು ಜೂನ್ 30, 2021 ರವರೆಗೆ ಮಾನ್ಯವಾಗಿದ್ದವು. ಇದಕ್ಕೂ ಮೊದಲು ರಸ್ತೆ ಮತ್ತು ಸಾರಿಗೆ ಸಚಿವಾಲಯವು ಮಾರ್ಚ್ 30- 2020, ಜೂನ್ 9-2020 ಮತ್ತು ಆಗಸ್ಟ್ 24-2020, ಡಿಸೆಂಬರ್ 27-2020, ಮಾರ್ಚ್ 26 -2021ರಂದು ವಿಸ್ತರಿಸಿತ್ತು.