ಬೆಂಗಳೂರು: ಸರ್ವಾನುಮತದಿಂದ ಬಸವರಾಜ್ ಬೊಮ್ಮಾಯಿ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಇಂದೇ ಈ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಯಿತು ಎಂದು ನಿರ್ಗಮಿತ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ನಮ್ಮಲ್ಲಿ ಯಾವುದೇ ಒಡಕಾಗಲಿ, ಅಸಮಾಧಾನವಾಗಲಿ ಇಲ್ಲ. ಎಲ್ಲರೂ ಒಮ್ಮತದಿಂದ ಸಂತೋಷವಾಗಿಯೇ ಬಸವರಾಜ್ ಬೊಮ್ಮಾಯಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿದ್ದೇವೆ ಎಂದರು.
ಇದೇ ವೇಳೆ ನಾನು ಯಾವುದೇ ಹುದ್ದೆಯನ್ನೂ ಸ್ವೀಕರಿಸಲ್ಲ. ರಾಜ್ಯಪಾಲರಾಗಿಯಾಗಲಿ ಅಥವಾ ಬೇರಾವುದೇ ಸ್ಥಾನವನ್ನಾಗಲಿ ನಾನು ಅಪೇಕ್ಷೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷವನ್ನು ರಾಜ್ಯದ ಉದ್ದಗಲಕ್ಕೂ ಸಂಘಟಿಸಿ, ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ತರುವುದೇ ನನ್ನ ಗುರಿ. ಈ ಬಗ್ಗೆ ಈ ಹಿಂದೆಯೇ ಸ್ಪಷ್ಟಪಡಿಸಿದ್ದೇನೆ ಎಂದು ತಿಳಿಸಿದರು.