ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ ಬಿ.ಎಸ್. ಯಡಿಯೂರಪ್ಪ 2 ತಿಂಗಳ ಹಿಂದೆಯೇ ರಾಜೀನಾಮೆ ನೀಡಲು ನಿರ್ಧರಿಸಿದ್ದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ರಾಜೀನಾಮೆ ವಿಚಾರದಲ್ಲಿ ದೆಹಲಿಯಿಂದ ನನಗೆ ಯಾವುದೇ ಒತ್ತಡವಿರಲಿಲ್ಲ. ನಾನಾಗೇ ಸ್ವಯಂ ಪ್ರೇರಿತನಾಗಿ ರಾಜೀನಾಮೆ ನೀಡಿದ್ದೇನೆ. ಎರಡು ತಿಂಗಳ ಹಿಂದೆಯೇ ತೀರ್ಮಾನಿಸಿದ್ದೆ. ಜುಲೈ 26ರಂದು ಸರ್ಕಾರ ಎರಡು ವರ್ಷ ಪೂರೈಸಲಿದ್ದು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದು ನಿರ್ಧರಿಸಿದ್ದೆ. ಬೇರೆಯವರಿಗೆ ಅವಕಾಶ ನೀಡುವ ಉದ್ದೇಶದಿಂದ ರಾಜೀನಾಮೆ ನೀಡಿದ್ದೇನೆ ಹೊರತು ಯಾರ ಒತ್ತಡದಿಂದ ಅಲ್ಲ ಎಂದು ಹೇಳಿದ್ದಾರೆ.
BIG NEWS: ‘ಪ್ರಮಾಣವಚನ’ ಸ್ವೀಕರಿಸಿದ ದಿನದಂದೇ ‘ಪದತ್ಯಾಗ’ ಮಾಡಿದ ಸಿಎಂ ಯಡಿಯೂರಪ್ಪ
ಇನ್ನು ಸಿಎಂ ಸ್ಥಾನಕ್ಕೆ ನಾನು ಯಾರ ಹೆಸರನ್ನೂ ಸೂಚಿಸಲ್ಲ. ಈ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಯಾರೇ ಸಿಎಂ ಆದರೂ ಕೂಡ ನಾನು ಸಹಕಾರ ನೀಡುತ್ತೇನೆ. ನನಗೆ ಯಾವುದೇ ಹುದ್ದೆ ಆಕಾಂಕ್ಷೆಗಳೂ ಇಲ್ಲ. ಯಾವ ಹುದ್ದೆಯನ್ನೂ ಸ್ವೀಕರಿಸಲ್ಲ. ಪಕ್ಷದ ಕಾರ್ಯಕರ್ತನಾಗಿ, ರಾಜ್ಯದ ಉದ್ದಗಲಕ್ಕೂ ಪಕ್ಷ ಸಂಘಟಿಸಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದು ಹೇಳಿದರು.
7 ಬಾರಿ ಶಾಸಕನಾಗಿ ಆಯ್ಕೆ ಮಾಡಿದ ಶಿಕಾರಿಪುರದ ಜನತೆಗೆ, ನನಗೆ ಬೆಂಬಲ ನೀಡಿದ ಎಲ್ಲಾ ಸ್ವಾಮೀಜಿಗಳಿಗೆ ಹಾಗೂ ರಾಜ್ಯದ ಜನತೆಗೆ ಧನ್ಯವಾದಗಳು. ವಿಶೇಷವಾಗಿ 75 ವರ್ಷ ದಾಟಿದರೂ 2 ವರ್ಷ ಸಿಎಂ ಆಗಲು ಅವಕಾಶ ನೀಡಿದ ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ ಹಾಗೂ ಬಿಜೆಪಿ ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದ ಎಂದು ತಿಳಿಸಿದ್ದಾರೆ.