ಬೆಂಗಳೂರು: ಆಗಸ್ಟ್ 2 ರಿಂದ ರಾಜ್ಯದಲ್ಲಿ ಪ್ರಾಥಮಿಕ ಹಂತದಿಂದಲೇ ಶಾಲೆಗಳನ್ನು ಆರಂಭಿಸುವ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ವರದಿ ನೀಡಿದೆ.
ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್ ನೇತೃತ್ವದ ಕಾರ್ಯಪಡೆ ಆಗಸ್ಟ್ 2 ರಿಂದ ಪ್ರಾಥಮಿಕ ಹಂತದಿಂದಲೇ ಶಾಲೆಗಳನ್ನು ಆರಂಭಿಸಲು ಸರ್ಕಾರಕ್ಕೆ ಶಿಫಾರಸು ಮಾಡಿದೆ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ, ಸಿಬಿಎಸ್ಇ ಸೇರಿದಂತೆ ಇತರೆ ಶಾಲೆಗಳ ತರಗತಿಗಳನ್ನು ಆರಂಭಿಸಲು ಸಲಹೆ ನೀಡಲಾಗಿದೆ.
ಆಗಸ್ಟ್ 2 ರಿಂದ ತರಗತಿಗಳನ್ನು ಆರಂಭಿಸಲು ಸಲಹೆ ನೀಡಲಾಗಿದ್ದು, ಒಂದೇ ಸಲಕ್ಕೆ ಶಾಲೆಗಳನ್ನು ಆರಂಭಿಸಲು ಸಾಧ್ಯವಾಗದಿದ್ದರೆ, ಮೊದಲಿಗೆ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳನ್ನು ಆರಂಭಿಸಬಹುದು. ನಂತರ ಉಳಿದ ತರಗತಿಗಳನ್ನು ಆರಂಭಿಸಬಹುದು ಎಂದು ಸಲಹೆ ನೀಡಲಾಗಿದೆ.
ಕಡಿಮೆ ಸಂಖ್ಯೆಯ ಮಕ್ಕಳಿರುವ ಶಾಲೆಗಳಲ್ಲಿ ಮುನ್ನೆಚ್ಚರಿಕೆಯೊಂದಿಗೆ ಕಾರ್ಯನಿರ್ವಹಿಸಬಹುದು. ಹೆಚ್ಚು ಮಕ್ಕಳ ಶಾಲೆಗಳಲ್ಲಿ ಪಾಳಿಯಲ್ಲಿ ಕಾರ್ಯನಿರ್ವಹಿಸಬಹುದು ಎಂದು ಹೇಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಪ್ರಾಥಮಿಕ ಹಂತದಿಂದಲೇ ಶಾಲೆಗಳನ್ನು ಆರಂಭಿಸುವ ಕುರಿತಂತೆ ಮೂರ್ನಾಲ್ಕು ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.