ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ನ 14 ನೇ ಆವೃತ್ತಿಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಬಾಕಿ ಉಳಿದ ಐಪಿಎಲ್ ಪಂದ್ಯಗಳು ಯುಎಇನಲ್ಲಿ ಸೆಪ್ಟೆಂಬರ್ 19 ರಿಂದ ಆರಂಭಗೊಳ್ಳಲಿದೆ. ಅಕ್ಟೋಬರ್ 15 ರಂದು ಫೈನಲ್ ಪಂದ್ಯ ನಡೆಯಲಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನಡೆಯಲಿರುವ ವಿವೋ ಐಪಿಎಲ್ 2021 ರ ಉಳಿದ ವೇಳಾಪಟ್ಟಿಯನ್ನು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ. ಒಟ್ಟು 31 ಪಂದ್ಯಗಳನ್ನು 27 ದಿನಗಳ ಅವಧಿಯಲ್ಲಿ ನಡೆಸಲಾಗುವುದು.
ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಈ ವರ್ಷ ಮೇ ತಿಂಗಳಲ್ಲಿ ಮುಂದೂಡಲ್ಪಟ್ಟ 14 ನೇ ಸೀಸನ್ ಸೆಪ್ಟೆಂಬರ್ 19 ರಂದು ದುಬೈನಲ್ಲಿ ಪುನರಾರಂಭಗೊಳ್ಳಲಿದ್ದು, ಸೆಪ್ಟೆಂಬರ್ 24 ರಂದು ಶಾರ್ಜಾದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಾಡಲಿದೆ.
ಒಟ್ಟಾರೆಯಾಗಿ, 13 ಪಂದ್ಯಗಳು ದುಬೈನಲ್ಲಿ, 10 ಶಾರ್ಜಾದಲ್ಲಿ ಮತ್ತು 8 ಪಂದ್ಯಗಳು ಅಬುಧಾಬಿಯಲ್ಲಿ ನಡೆಯಲಿದೆ.
ಅಕ್ಟೋಬರ್ 8 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ನಡುವೆ ಲೀಗ್ ಹಂತದ ಅಂತಿಮ ಪಂದ್ಯ ನಡೆಯಲಿದೆ.
1 ನೇ ಕ್ವಾಲಿಫೈಯರ್ ಅಕ್ಟೋಬರ್ 10 ರಂದು ದುಬೈನಲ್ಲಿ ನಡೆಯಲಿದೆ. ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ 2 ಅನ್ನು ಕ್ರಮವಾಗಿ ಅಕ್ಟೋಬರ್ 11 ಮತ್ತು 13 ರಂದು ಶಾರ್ಜಾದಲ್ಲಿ ನಡೆಸಲಾಗುವುದು. ಅಕ್ಟೋಬರ್ 15 ರಂದು ದುಬೈನಲ್ಲಿ ಈ ವರ್ಷದ ವಿವೋ ಐಪಿಎಲ್ 2021 ರ ಫೈನಲ್ ಪಂದ್ಯ ನಡೆಯಲಿದೆ.