ಹೈದರಾಬಾದ್: ಮತದಾರರಿಗೆ ಹಣ ಹಂಚಿದ ತೆಲಂಗಾಣ ರಾಷ್ಟ್ರ ಸಮಿತಿಯ ಸಂಸದೆಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಸಂಸದೆಗೆ ಶಿಕ್ಷೆ ನೀಡಿದ ಮೊದಲ ಪ್ರಕರಣ ಇದೆಂದು ಹೇಳಲಾಗಿದೆ.
ತೆಲಂಗಾಣದ ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ TRS ಸಂಸದೆ ಮಾಲೋತ್ ಕವಿತಾಗೆ ಆರು ತಿಂಗಳ ಜೈಲು ವಾಸ ವಿಧಿಸಲಾಗಿದೆ. 2019 ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ಹಣ ಹಂಚಿಕೆ ಮಾಡಿ ಮತ ಕೇಳಿದ್ದ ಹಿನ್ನೆಲೆಯಲ್ಲಿ ಕೋರ್ಟ್ ಶಿಕ್ಷೆ ವಿಧಿಸಿದೆ.
ಮಾಲೋತ್ ಕವಿತಾ ಮತ್ತು ಅವರ ಸಹಚರನೊಬ್ಬನಿಗೆ ನಾಂಪಲ್ಲಿ ವಿಶೇಷ ನ್ಯಾಯಾಲಯ ಶಿಕ್ಷೆ ನೀಡಿದೆ. ಮೆಹಬೂಬ್ ಕ್ಷೇತ್ರದ ಚುನಾವಣೆಯ ಸಂದರ್ಭದಲ್ಲಿ ಮತದಾನಕ್ಕಾಗಿ ಹಣ ನೀಡಿದ್ದ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಕವಿತಾ ತೆಲಂಗಾಣ ಹೈಕೋರ್ಟ್ ಮೊರೆ ಹೋಗಿದ್ದಾರೆ ಎಂದು ಹೇಳಲಾಗಿದೆ.
2019 ರಲ್ಲಿ ಸಂಸದೆಯ ಸಹಾಯಕ ಶೌಕತ್ ಆಲಿ ಮತದಾರರಿಗೆ ಹಣ ಹಂಚುವ ಸಂದರ್ಭದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಕವಿತಾ ಪರವಾಗಿ ಮತ ಚಲಾವಣೆ ಮಾಡಲು ಮತದಾರರಿಗೆ 500 ರೂ. ನೀಡಲಾಗುತ್ತಿದ್ದ ಸಂದರ್ಭದಲ್ಲಿ ರೆಡ್ ಹ್ಯಾಂಡಾಗಿ ಹಿಡಿದು ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದಲ್ಲಿ ಶೌಕತ್ ಅಲಿ ಮೊದಲ ಆರೋಪಿಯಾಗಿದ್ದು ಸಂಸದೆ ಕವಿತಾ ಎರಡನೇ ಆರೋಪಿಯಾಗಿದ್ದಾರೆ. ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಮತ್ತು ಪೊಲೀಸರ ವರದಿ, ಸಾಕ್ಷಿಗಳ ಹಾಜರಿ, ವಿಚಾರಣೆ ನಂತರ ಕೋರ್ಟ್ ಶಿಕ್ಷೆ ನೀಡಿದೆ.