ಬೆಂಗಳೂರು: ಯಡಿಯೂರಪ್ಪನವರನ್ನು ಬಲವಂತವಾಗಿ ಕೆಳಗಿಳಿಸಲಾಗುತ್ತದೆ. ಇದಕ್ಕಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ, ಅವರನ್ನು ಇರಿಸುವುದು ಸರಿಯಲ್ಲ ಎಂದು ನಿಡುಮಾಮಿಡಿ ಸ್ವಾಮೀಜಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗೆ ಇಳಿಸಿದರೆ ವೀರಶೈವ ಲಿಂಗಾಯತರಿಗೆ ಅಧಿಕಾರ ನೀಡಬೇಕು. ಇಲ್ಲದಿದ್ದರೆ ಬಿಜೆಪಿ ಲಿಂಗಾಯಿತ ಮತಗಳನ್ನು ಕಳೆದುಕೊಳ್ಳಲಿದೆ. ಬಿಜೆಪಿಯಿಂದ ಲಿಂಗಾಯಿತರು ದೂರವುಳಿಯುತ್ತಾರೆ. ಎಂದು ನಿಡುಮಾಮಿಡಿ ಸ್ವಾಮೀಜಿ ಹೇಳಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ದಕ್ಷತೆ ಮತ್ತು ಕ್ರಿಯಾಶೀಲತೆಯಿಂದ ಕೆಲಸ ಮಾಡಿದ್ದಾರೆ. ನೆರೆ ಪರಿಸ್ಥಿತಿ, ಬರಗಾಲ ಬಂದ ವೇಳೆ ಸಮರ್ಥವಾಗಿ ನಿಭಾಯಿಸಿದ್ದಾರೆ. ಯಡಿಯೂರಪ್ಪನವರಿಗೆ ವಯಸ್ಸು ಮೀರಿದೆ ಎಂದು ಬಿಜೆಪಿ ವರಿಷ್ಠರು ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಮುಂದಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಬದಲಾವಣೆಯ ಅವಶ್ಯಕತೆಯಿದೆಯೇ ಎಂದು ಪ್ರಶ್ನಿಸಿದ್ದಾರೆ.
ಯಡಿಯೂರಪ್ಪನವರಿಗೆ ಸರಿಸಾಟಿಯಾದ ನಾಯಕತ್ವ ಇಲ್ಲ. ರಾಜ್ಯದಲ್ಲಿ ಕೊರೋನಾ ಮೂರನೆಯ ಅಲೆ ಬರುವ ಸಾಧ್ಯತೆ ಇದೆ. ನೆರೆ ಪರಿಸ್ಥಿತಿ ಇದೆ. ಇಂತಹ ಸಮಯದಲ್ಲಿ ಬದಲಾವಣೆಗೆ ಅವಕಾಶ ಕೊಡದೇ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು ಎಂದು ಹೇಳಿದ್ದಾರೆ.
ಜಾತಿ-ಮತ ಎಲ್ಲವನ್ನೂ ಮೀರಿದ ನಾಯಕ ಯಡಿಯೂರಪ್ಪ ಅವರನ್ನು ಮುಂದುವರೆಸಲು ಮಠಾಧೀಶರ ಮಾತಿಗೆ ಬಿಜೆಪಿ ವರಿಷ್ಠರು ಗೌರವ ನೀಡಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ವಯಸ್ಸಿನ ವಿಚಾರ, ಪಕ್ಷದ ವಿಚಾರವನ್ನು ನಾನು ಒಪ್ಪುತ್ತೇನೆ. 6 ತಿಂಗಳಾದರೂ ಯಡಿಯೂರಪ್ಪನವರನ್ನು ಮುಂದುವರೆಸಬೇಕು. ಮಠಾಧೀಶರ ಮಾತಿಗೆ ಬೆಲೆ ಕೊಡಬೇಕು. ನಂತರ ನಿಮ್ಮ ಇಚ್ಛೆಯಂತೆ ನಡೆದುಕೊಳ್ಳಿ ಎಂದು ಬೆಂಗಳೂರಿನಲ್ಲಿ ನಿಡುಮಾಮಿಡಿ ಸ್ವಾಮೀಜಿ ಹೇಳಿದ್ದಾರೆ.