ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡದಂತೆ ಒತ್ತಡ ಹೇರಲು ಇಂದು ಮಠಾಧೀಶರು ಸಮಾವೇಶ ನಡೆಸಲಿದ್ದಾರೆ.
ಇದೇ ಉದ್ದೇಶಕ್ಕಾಗಿ ಸಭೆ ನಡೆಯುತ್ತಿಲ್ಲವೆಂದು ಹೇಳಲಾಗಿದ್ದರೂ ಮುಖ್ಯಮಂತ್ರಿ ಬದಲಿಸದಂತೆ ಪರೋಕ್ಷವಾಗಿ ಒತ್ತಾಯ ಮಾಡಲಾಗುವುದು ಎನ್ನಲಾಗಿದೆ. ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರ ನೇತೃತ್ವದಲ್ಲಿ ಅರಮನೆ ಮೈದಾನದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ ನಡೆಸಿ ಸಿಎಂ ಬದಲಾವಣೆ ಮಾಡದಂತೆ ಒತ್ತಡ ಹೇರುವ ಸಾಧ್ಯತೆ ಇದೆ.
ರಾಜ್ಯದ ವರ್ತಮಾನ ಸಮಸ್ಯೆ, ಪರಿಹಾರ, ಮಠಗಳ ಕೊಡುಗೆ, ಸಾಮಾಜಿಕ ವ್ಯವಸ್ಥೆಯಲ್ಲಿ ಮಠಗಳ ಪಾತ್ರ, ಮಠಗಳ ಬಗೆಗಿನ ತಪ್ಪು ಸಂದೇಶ ಕುರಿತಂತೆ ಸ್ಪಷ್ಟೀಕರಣ ಹಾಗೂ ಕೊರೋನಾ ಸಂದರ್ಭದಲ್ಲಿ ಮಠಗಳು ಕೈಗೊಳ್ಳಬೇಕಿರುವ ಕ್ರಮಗಳ ಕುರಿತಂತೆ ಚರ್ಚೆ ನಡೆಸಿ ಸರ್ಕಾರಕ್ಕೆ ಸಲಹೆ ನೀಡುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ. ಇದರೊಂದಿಗೆ ಎಲ್ಲ ಧಾರ್ಮಿಕ ಕೇಂದ್ರಗಳಿಗೆ ನೆರವು ನೀಡಿದ ಸಿಎಂ ಯಡಿಯೂರಪ್ಪ ಅವರನ್ನು ಅಭಿನಂದಿಸಲಾಗುವುದು.