ರಾಜ್ಯದಲ್ಲಿ ಸಂಭವನೀಯ ನಾಯಕತ್ವ ಬದಲಾವಣೆಯ ಊಹಾಪೋಹಗಳ ಮಧ್ಯೆ, ಬಿಜೆಪಿಯ ವರಿಷ್ಠರು ಹಲವರ ಹೆಸರನ್ನು ಸಿಎಂ ಸ್ಥಾನಕ್ಕೆ ಪರಿಗಣಿಸಿದ್ದಾರೆ ಎನ್ನಲಾಗಿದೆ.
ರಾಜ್ಯದ ಪ್ರಭಾವಿ ನಾಯಕ, ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ ಅವರ ಸ್ಥಾನಕ್ಕೇರಲು ಹಲವರು ತೆರೆಮರೆಯಲ್ಲೇ ಪ್ರಯತ್ನ ನಡೆಸಿದ್ದಾರೆ. ಆದರೆ, ಯಡಿಯೂರಪ್ಪ ಅವರಿಗೆ ಇನ್ನೆರಡು ದಿನದಲ್ಲಿ ವರಿಷ್ಠರಿಂದ ಯಾವುದೇ ಸೂಚನೆ ಬರದಿದ್ದರೆ, ಅವರೇ ಮುಖ್ಯಮಂತ್ರಿಯಾಗಿ ಅವಧಿ ಪೂರೈಸಲಿದ್ದಾರೆ.
2023 ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ನಾಯಕತ್ವ ಕೆಲವು ಹೆಸರುಗಳನ್ನು ಪಟ್ಟಿ ಮಾಡಿದೆ ಎಂದು ಬಿಜೆಪಿ ಮೂಲಗಳನ್ನು ಉಲ್ಲೇಖಿಸಿದ ವರದಿಯೊಂದು ತಿಳಿಸಿದೆ. ಬಿಜೆಪಿ ವರಿಷ್ಠರು ಸಿಎಂ ಹುದ್ದೆಗೆ 8 ಜನರನ್ನು ಶಾರ್ಟ್‌ಲಿಸ್ಟ್ ಮಾಡಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ಪರಂಪರೆ ಮುಂದುವರೆಸಲು ಲಿಂಗಾಯತರನ್ನು ಆಯ್ಕೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಧಾರವಾಡ ಪಶ್ಚಿಮ ಶಾಸಕ ಅರವಿಂದ್ ಬೆಲ್ಲದ್, ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್. ನಿರಾಣಿ, ಬಸವರಾಜ್ ಬೊಮ್ಮಾಯಿ ಅವರು ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಅವರಿಗೆ ಅವಕಾಶ ಸಿಗಬಹುದು ಎಂದು ಹೇಳಲಾಗಿದೆ.
ಯತ್ನಾಳ್ ಅವರು ಆರ್.ಎಸ್.ಎಸ್. ಹಿನ್ನಲೆ ಹೊಂದಿದ್ದಾರೆ. ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವೂ ಅವರಿಗೆ ಅನುಕೂಲವಾಗಬಹುದು. ಅವರು ಉತ್ತರ ಕರ್ನಾಟಕದಲ್ಲಿ ಜನಪ್ರಿಯ ನಾಯಕರಾಗಿದ್ದು, ಈ ವರ್ಷದ ಆರಂಭದಲ್ಲಿ ಪಂಚಮಸಾಲಿ ಲಿಂಗಾಯತರು ಮೀಸಲಾತಿಗೆ ನಡೆಸಿದ ಆಂದೋಲನದಲ್ಲಿ ಮುಂಚೂಣಿಯಲ್ಲಿದ್ದರು. ಅವರನ್ನು ಪ್ರಧಾನಿ ನರೇಂದ್ರ ಮೋದಿ ಆಯ್ಕೆ ಮಾಡಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಯಡಿಯೂರಪ್ಪ ಅವರು ಸಿಎಂ ಹುದ್ದೆಗೆ ತಮ್ಮ ಉತ್ತರಾಧಿಕಾರಿಯನ್ನು ಸೂಚಿಸಲು ಕೇಳಿದರೆ ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಹೆಸರಿಸುವ ಸಾಧ್ಯತೆಯಿದೆ. ಪ್ರಹ್ಲಾದ್ ಜೋಶಿ, ಬಿ.ಎಲ್. ಸಂತೋಷ್, ಸಿ.ಎನ್. ಅಶ್ವತ್ಥನಾರಾಯಣ್, ಲಕ್ಷ್ಮಣ್ ಸವದಿ, ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಸಿ.ಟಿ. ರವಿ ಅವರನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ ಎನ್ನಲಾಗಿದೆ.
ಯಡಿಯೂರಪ್ಪ ಅವರನ್ನು ಬದಲಿಸಲು ಲಾಬಿ ಮಾಡುತ್ತಿರುವುದನ್ನು ನಿರಾಕರಿಸಿದ ನಿರಾಣಿ ಬಿಜೆಪಿ ಕೇಂದ್ರ ನಾಯಕತ್ವ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿದ್ದಾರೆ. ನಾನು ಸಾಮಾನ್ಯ ಬಿಜೆಪಿ ಕಾರ್ಯಕರ್ತ. ಪಕ್ಷದ ಆಜ್ಞೆಯನ್ನು ಅನುಸರಿಸುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಯಡಿಯುರಪ್ಪ ಅವರನ್ನು ಬದಲಿಸಲು ಯಾವುದೇ ಸೂಚನೆ ಇಲ್ಲ. ಅವರು ನಮ್ಮ ನಾಯಕರಾಗಿದ್ದಾರೆ. ನಾವೆಲ್ಲರೂ ಅವರೊಂದಿಗೆ ಇದ್ದೇವೆ. ಬಿಜೆಪಿ ಉನ್ನತ ನಾಯಕರು ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ. ಸುಮಾರು 15 ದಿನಗಳ ಹಿಂದೆ ನಿರಾಣಿ ದೆಹಲಿಗೆ ಭೇಟಿ ನೀಡಿದ್ದರು. ಈಗ ಮತ್ತೊಮ್ಮೆ ದೆಹಲಿಗೆ ಹೋಗಿ ಬಂದಿದ್ದಾರೆ.
ಈ ನಡುವೆ ನಾಳೆ ಸ್ವಾಮೀಜಿಗಳು ಸಮಾವೇಶ ಆಯೋಜಿಸಿದ್ದು, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ತೆಗೆದುಹಾಕದಂತೆ ಬಿಜೆಪಿ ಹೈಕಮಾಂಡ್‌ಗೆ ಸ್ಪಷ್ಟವಾದ ಸಂದೇಶವನ್ನು ಕಳುಹಿಸಲಿದ್ದಾರೆ ಎನ್ನಲಾಗಿದೆ. ಜುಲೈ 26 ರ ನಂತರ ಯಡಿಯೂರಪ್ಪ ರಾಜೀನಾಮೆ ನೀಡದಂತೆ ಅವರನ್ನು ಸಿಎಂ ಸ್ಥಾನದಲ್ಲಿ ಉಳಿಸುವ ಕೊನೆಯ ಪ್ರಯತ್ನವಾಗಿ ಈ ಸಮಾವೇಶವನ್ನು ನಡೆಸಲಾಗ್ತಿದೆ ಎನ್ನಲಾಗಿದೆ.
ಯಡಿಯೂರಪ್ಪ ಅವರು ಪಕ್ಷದ ಹೈಕಮಾಂಡ್‌ನಿಂದ ಇಲ್ಲಿಯವರೆಗೆ ಯಾವುದೇ ಸಂದೇಶವನ್ನು ಸ್ವೀಕರಿಸಿಲ್ಲ. ಜುಲೈ 25 ರ ಸಂಜೆ ಅಂದರೆ ನಾಳೆ ಅವರಿಗೆ ಸಂದೇಶ ಬರಬಹದು. ಇದಕ್ಕೆಲ್ಲಾ ತಲೆಕಡಿಸಿಕೊಳ್ಳದ ಯಡಿಯೂರಪ್ಪ ಮಳೆ, ನೆರೆಹಾನಿಯ ಪ್ರದೇಶಗಳ ಪರಿಶೀಲನೆಗೆ ನಾಳೆ ವೈಮಾನಿಕ ಸಮೀಕ್ಷೆ ಕೈಗೊಂಡಿದ್ದಾರೆ.