ಬೆಂಗಳೂರು: ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನಿಡಲಾಗುವ ಮಾತೃಪೂರ್ಣ ಯೋಜನೆಯಡಿಯ ಮೊಟ್ಟೆ ವಿತರಣೆ ಟೆಂಡರ್ ನಲ್ಲಿ ಕಿಕ್ ಬ್ಯಾಕ್ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ರಾಜೀನಾಮೆಗೆ ಆಗ್ರಹಿಸಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.
ಅಪೌಷ್ಠಿಕತೆಯಿಂದ ಬಳಲುತ್ತಿರುವ ಗರ್ಭಿಣಿಯರು ಹಾಗೂ ಮಕ್ಕಳಿಗೆ ವಿತರಿಸುವ ಮೊಟ್ಟೆ ವಿತರಣೆ ಟೆಂಡರ್ ನಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಕೋಟ್ಯಂತರ ರೂಪಾಯಿ ಕಿಕ್ ಬ್ಯಾಕ್ ಪಡೆದಿರುವ ಬಗ್ಗೆ ಖಾಸಗಿ ಸುದ್ದಿವಾಹಿನಿ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಿಗೆಳೆದಿದ್ದು, ಈ ಹಿನ್ನೆಲೆಯಲ್ಲಿ ಸಚಿವೆ ರಾಜೀನಾಮೆಗೆ ಒತ್ತಾಯಿಸಿ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಮೌರ್ಯ ಸರ್ಕಲ್ ಬಳಿಯ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
ಮಹಿಳಾ ಮತ್ತು ಮಕ್ಕಳ ಸಚಿವರೇ ಅಕ್ರಮದಲ್ಲಿ ಭಾಗಿಯಾಗಿದ್ದು, ಬಡ ಮಕ್ಕಳ ಹೊಟ್ಟೆಗೂ ಕನ್ನ ಹಾಕುತ್ತಿದ್ದಾರೆ. ಕೋವಿಡ್ ನಿಂದ ಈಗಾಗಲೇ ಹಲವು ಮಕ್ಕಳು, ಮಹಿಳೆಯರು ಅನಾರೋಗ್ಯಕ್ಕೀಡಾಗಿದ್ದು, ಇಂತಹ ಸಂದರ್ಭದಲ್ಲಿ ಸಚಿವರು ಮೊಟ್ಟೆಯಲ್ಲಿಯೂ ಭ್ರಷ್ಟಾಚಾರ ನಡೆಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಶಶಿಕಲಾ ಜೊಲ್ಲೆ ಹಣ ಪಡೆಯಲು ನೇರವಾಗಿ ಡೀಲ್ ಗೆ ಮಧ್ಯಸ್ಥಿಕೆ ವಹಿಸಿದ್ದ ಶಾಸಕ ಪರಣ್ಣ ಮುನವಳ್ಳಿ ವಿರುದ್ಧವೂ ಉತ್ತರ ಕರ್ನಾಟಕ ಭಾಗದಲ್ಲಿ ಪ್ರತಿಭಟನೆ ಆರಂಭವಾಗಿದೆ.