ಕೊರೊನಾ ಮೊದಲ-ಎರಡನೇ ಅಲೆ ಸಾಕಷ್ಟು ನಷ್ಟವನ್ನುಂಟು ಮಾಡಿದೆ. ಲಕ್ಷಾಂತರ ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ನೆಮ್ಮದಿ ಸುದ್ದಿಯೊಂದಿದೆ. ನೌಕರರ ರಾಜ್ಯ ವಿಮಾ ನಿಗಮ(ಇಎಸ್ಐಸಿ) ಇತ್ತೀಚೆಗೆ ಕೋವಿಡ್ -19 ಪರಿಹಾರ ಯೋಜನೆಗೆ ಅನುಮೋದನೆ ನೀಡಿದೆ.
ಈ ಯೋಜನೆಯಡಿಯಲ್ಲಿ, ಕೊರೊನಾದಿಂದ ಇಎಸ್ಐಸಿ ಕಾರ್ಡ್ ಹೊಂದಿರುವವರು ಸಾವನ್ನಪ್ಪಿದ್ರೆ ಅವಲಂಬಿತರಿಗೆ ಸಹಾಯ ನೀಡಲಾಗುವುದು. ಇಎಸ್ಐಸಿ ವ್ಯಾಪ್ತಿಯಲ್ಲಿ ವಿಮೆ ಮಾಡಿದ ಉದ್ಯೋಗಿ ಕೊರೊನಾದಿಂದ ಸತ್ತರೆ, ಆತನ ಅವಲಂಬಿತರಿಗೆ ಇಎಸ್ಐಸಿಯಿಂದ ತಿಂಗಳಿಗೆ ಕನಿಷ್ಠ 1800 ರೂಪಾಯಿ ಪಿಂಚಣಿ ಸಿಗಲಿದೆ.
ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಕುಟುಂಬವು ಮೃತ ನೌಕರನ ವೇತನವನ್ನು ಪಡೆಯುತ್ತದೆ ಎಂದು ಇಎಸ್ಐಸಿಯ ವಿಮಾ ಆಯುಕ್ತ ಎಂ.ಕೆ.ಶರ್ಮಾ ಹೇಳಿದ್ದಾರೆ. ಇಎಸ್ಐಸಿಗೆ ಕೊಡುಗೆ ನೀಡುವ ವ್ಯಕ್ತಿಯು ಕೊರೊನಾದಿಂದ ಸತ್ತರೆ, ಅವನ ಕುಟುಂಬದ ಹೆಂಡತಿ, ಮಕ್ಕಳು, ಅವಲಂಬಿತ ಪೋಷಕರು ಅಥವಾ ಒಡಹುಟ್ಟಿದವರಿಗೆ ಪ್ರತಿ ತಿಂಗಳು ನೌಕರರ ಅಂತಿಮ ವೇತನದ ಶೇಕಡಾ 90 ರಷ್ಟು ಹಣ ಸಿಗಲಿದೆ.
ಯಾವುದೇ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿ ಕನಿಷ್ಠ 70 ದಿನಗಳ ಕಾಲ ಇಎಸ್ಐಸಿಗೆ ಕೊಡುಗೆ ನೀಡಿದ್ದರೆ ಆತನ ಕುಟುಂಬಕ್ಕೆ ಯೋಜನೆ ಲಾಭ ಸಿಗಲಿದೆ. ಕಂಪನಿಯಲ್ಲಿ ಕೊರೊನಾಗಿಂತ ಮೊದಲು ಕನಿಷ್ಠ ಮೂರು ತಿಂಗಳಾದ್ರೂ ಕೆಲಸ ಮಾಡಿರಬೇಕು.