ಮಾಸ್ಕೋ: ಭ್ರಷ್ಟಾಚಾರ ಮಾಡುವವರು ನಮ್ಮ ದೇಶದಲ್ಲಷ್ಟೇ ಅಲ್ಲ ಜಗತ್ತಿನಾದ್ಯಂತ ಲಂಚಬಾಕರು ಇದ್ದಾರೆ. ಜನಸಾಮಾನ್ಯರ ದುಡ್ಡು ತಿಂದು ಐಷಾರಾಮಿ ಜೀವನ ನಡೆಸುತ್ತಾರೆ. ಇದೀಗ ರಷ್ಯಾದಲ್ಲೊಂದು ಇಂಥ ಪ್ರಕರಣ ಬೆಳಕಿಗೆ ಬಂದಿದೆ.
ಹೌದು, ರಷ್ಯಾದಲ್ಲಿ ಟ್ರಾಫಿಕ್ ಪೊಲೀಸರ ಭ್ರಷ್ಟಾಚಾರವನ್ನು ತಿಳಿದ ಅಧಿಕಾರಿಗಳು ಮನೆಗಳಿಗೆ ದಾಳಿ ಮಾಡಿದ್ದಾರೆ. ಆದರೆ ಟ್ರಾಫಿಕ್ ಪೊಲೀಸ್ ಮುಖ್ಯಸ್ಥನ ಶೌಚಾಲಯ ಕಂಡು ಸ್ವತಃ ಅಧಿಕಾರಿಗಳು ದಂಗಾಗಿದ್ದಾರೆ. ಆ ಟಾಯ್ಲೆಟ್ ಕಮೋಡ್ ಸಾಮಾನ್ಯವಾದ ಕಮೋಡ್ ಆಗಿರದೆ ಚಿನ್ನದ್ದಾಗಿತ್ತು. ನೆಲಕ್ಕೆ ಮಾರ್ಬಲ್ ಹಾಸಲಾಗಿತ್ತು. ಇದನ್ನು ಕಂಡ ಅಧಿಕಾರಿಗಳು ಒಂದು ಕ್ಷಣ ಶಾಕ್ ಆಗಿದ್ದಾರೆ.
ರಷ್ಯಾದ ಪ್ರತಿಷ್ಠಿತ ಸ್ಟಾವ್ರೊಪೋಲ್ ಪ್ರದೇಶದಲ್ಲಿರುವ ಪೊಲೀಸ್ ಮುಖ್ಯಸ್ಥರ ನಿವಾಸವು ಅರಮನೆಯಂತಿದೆ. ಇನ್ನು ತನಿಖಾಧಿಕಾರಿಗಳು ಪೊಲೀಸ್ ಅಧಿಕಾರಿ ಅಲೆಕ್ಸಿ ಸಫೊನೊವ್ ಅವರನ್ನು ವಶಪಡಿಸಿಕೊಂಡಿದ್ದಾರೆ. ತನಿಖೆ ಬಳಿಕ ತಪ್ಪಿತಸ್ಥರೆಂದು ಸಾಬೀತಾದಲ್ಲಿ ಕಠಿಣ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾರೆ ಎನ್ನಲಾಗಿದೆ.
ಇನ್ನು ತನಿಖಾಧಿಕಾರಿಗಳು ಅಧಿಕಾರಿಯ ಭವ್ಯವಾದ ನಿವಾಸದ ದೃಶ್ಯಗಳನ್ನು ಬಿಡುಗಡೆ ಮಾಡಿದ್ದಾರೆ. ಸೊಂಪಾದ ಹಸಿರು ಹುಲ್ಲುಹಾಸುಗಳನ್ನು ಹೊಂದಿರುವ ಅರಮನೆಯಂತಿರುವ ಬಂಗಲೆ, ಐಶಾರಾಮಿ ಕಾರುಗಳು ಮುಂತಾದವುಗಳ ಫೋಟೋವನ್ನು ತನಿಖಾಧಿಕಾರಿಗಳು ರಿಲೀಸ್ ಮಾಡಿದ್ದಾರೆ.
ಅಲ್ಲದೆ ಮನೆಯೊಳಗಿರುವ ಪೀಠೋಪಕರಣಗಳು, ಗೋಡೆ ಚಿತ್ರ ಮುಂತಾದವುಗಳು ಚಿನ್ನದಿಂದ ಕೂಡಿವೆ. ಮನೆಯ ಮುಖ್ಯದ್ವಾರದ ಬಳಿಯಲ್ಲೇ ಅತಿಥಿಗಳಿಗಾಗಿ ಔಟ್ ಹೌಸ್ ಕೂಡ ಇವೆ ಎಂದು ವಿಡಿಯೋ ಮುಖಾಂತರ ದಾಖಲೆ ಬಿಡುಗಡೆ ಮಾಡಿದ್ದಾರೆ.